ನವದೆಹಲಿ: ಸೋಮವಾರ ಲೋಕಸಭೆಯಲ್ಲಿ ಕೇಂದ್ರ ಸರ್ಕಾರ ಪೌರತ್ವ (ತಿದ್ದುಪಡಿ) ಮಸೂದೆ-2019 ಅನುಮೋದನೆ ನೀಡಿತ್ತು. ಈ ವೇಳೆ ವಿಶೇಷ ಎಂದರೆ ಮಹಾರಾಷ್ಟ್ರದಲ್ಲಿ ಬಿಜೆಪಿಯಿಂದ ಬೇರ್ಪಟ್ಟು, NCP ಹಾಗೂ ಕಾಂಗ್ರೆಸ್ ಜೊತೆ ಕೈಜೋಡಿಸಿರುವ ಶಿವಸೇನಾ ಕೂಡ ಲೋಕಸಭೆಯಲ್ಲಿ ಈ ಮಸೂದೆಗೆ ತನ್ನ ಬೆಂಬಲ ಸೂಚಿಸಿತ್ತು. ಇದಕ್ಕೆ ಸಂಬಂಧಿಸಿದಂತೆ ಆಲ್ ಇಂಡಿಯಾ ಮಜ್ಲಿಸ್ ಎ ಇತ್ತೆಹಾದುಲ್ ಮುಸ್ಲೀಮ್ಮೀನ್ ಪಕ್ಷದ ಮುಖ್ಯಸ್ಥ ಹಾಗೂ ಸಂಸದ ಅಸಾದುದ್ದೀನ್ ಒವೈಸಿ ಶಿವಸೇನೆಗೆ ಟಾಂಗ್ ನೀಡಿದ್ದಾರೆ. ಈ ಕುರಿತು ಮಾತನಾಡಿರುವ ಅವರು ಶಿವಸೇನೆಯ ಈ ಕ್ರಮ 'ಭಾಂಗಡಾ ರಾಜಕೀಯ'ವಾಗಿದೆ ಎಂದು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಶಿವಸೇನೆಯ ಕ್ರಮವನ್ನು 'ಭಾಂಗಡಾ ರಾಜಕೀಯ' ಎಂದು ಸಂಬೋಧಿಸಿರುವ ಒವೈಸಿ, ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ಅಲ್ಲಿನ ಮೂರು ಪಕ್ಷಗಳು ಕನಿಷ್ಠ ಸಾಮಾನ್ಯ ಕಾರ್ಯಕ್ರಮವನ್ನು ಸಿದ್ಧಪಡಿಸಿದ್ದು, ಅದರಲ್ಲಿ ಶಿವಸೇನೆ, ಪಕ್ಷ ಜ್ಯಾತ್ಯಾತೀತ ಪಕ್ಷ ಎಂದು ಹೇಳಿಕೊಂಡಿದೆ. ಆದರೆ, ಇದೀಗ ಅದು ಸಂಸತ್ತಿನಲ್ಲಿ CABಗೆ ಬೆಂಬಲ ನೀಡಿದ್ದು, ಈ ಮಸೂದೆ ಜ್ಯಾತ್ಯಾತೀತ ವಿಚಾರಧಾರೆ ಹಾಗೂ ಸಂವಿಧಾನದ ಅನುಚ್ಛೇದ 14ರ ಉಲ್ಲಂಘನೆಯಾಗಿದೆ. ಇದು ಶಿವಸೇನೆಯ ಅವಕಾಶವಾದಿ ರಾಜಕೀಯವನ್ನು ಎತ್ತಿತೋರಿಸುತ್ತದೆ ಎಂದಿದ್ದಾರೆ.


ಬುಧವಾರ(10 ಡಿಸೆಂಬರ್)ದಂದು ಪೌರತ್ವ ತಿದ್ದುಪಡಿ ಮಸೂದೆ ರಾಜ್ಯಸಭೆಯಲ್ಲಿ ಚರ್ಚೆಗೆ ಬರಲಿದೆ. ಇದಕ್ಕೂ ಮೊದಲು ಮಾತನಾಡಿರುವ ಮಹಾರಾಷ್ಟ್ರದ ಮುಖ್ಯಮಂತ್ರಿ ಹಾಗೂ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ, ಈ ಮಸೂದೆಯ ಕುರಿತು ಸುಧೀರ್ಘ ಚರ್ಚೆ ನಡೆಯುವ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ. ಮಸೂದೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮಾಡಿರುವ ಟ್ವೀಟ್ ಬಳಿಕ ಶಿವಸೇನಾ ತನ್ನ ನಿಲುವು ಬದಲಾಯಿಸಿದೆ ಎನ್ನಲಾಗುತ್ತಿದೆ. ಈ ಕುರಿತು ಟ್ವೀಟೋಕ್ತಿ ಮಾಡಿದ್ದ ರಾಹುಲ್ ಗಾಂಧಿ, ಈ ಮಸೂದೆಯನ್ನು ಬೆಂಬಲಿಸುವವರು, ದೇಶದ ಅಡಿಪಾಯಕ್ಕೆ ಪೆಟ್ಟುನೀಡುತ್ತಿದ್ದಾರೆ ಎಂಬುದನ್ನು ಅರಿಯಬೇಕು ಎಂದಿದ್ದರು. ಈ ಬಗ್ಗೆ ಮಾತನಾಡಿದ್ದ NCP  ವಕ್ತಾರ ನವಾಬ್ ಮಲಿಕ್ ಶಿವಸೇನೆ ಹಾಗೂ NCP ಬೇರೆ ಬೇರೆ ಪಕ್ಷಗಲಾಗಿದ್ದು, ಯಾವುದೇ ಒಂದು ವಿಷಯದ ಮೇಲೆ ಪ್ರತ್ಯೇಕ ನಿಲುವು ತಳೆಯಲು ಸ್ವತಂತ್ರವಾಗಿವೆ ಎಂದಿದ್ದಾರೆ.


ಇದಕ್ಕೂ ಮೊದಲು ಲೋಕಸಭೆಯಲ್ಲಿ ಮಂಡನೆಯಾದ ಪೌರತ್ವ ತಿದ್ದುಪಡಿ ಮಸೂದೆಗೆ ಶಿವಸೇನೆ ತನ್ನ ಬೆಂಬಲವನ್ನು ಸೂಚಿಸುವ ನಿರ್ಣಯ ಕೈಗೊಂಡಿತ್ತು. ಪಕ್ಷದ ಸಂಸದರಾಗಿರುವ ಸಂಜಯ್ ರಾವುತ್ ಸೋಮವಾರ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಕುರಿತು ಘೋಷಣೆಯನ್ನು ಕೂಡ ಮಾಡಿದ್ದರು. ಈ ಕುರಿತು ಟ್ವೀಟ್ ಮಾಡಿದ್ದ ಅವರು, "ಅಕ್ರಮವಾಗಿ ಬಂದು ನೆಲೆಸಿರುವ ನುಸುಳುಕೊರರನ್ನು ಹೊರಗಟ್ಟಬೇಕು" ಎಂದಿದ್ದರು. ಅಷ್ಟೇ ಅಲ್ಲ ವಲಸೆ ಬಂದ ಹಿಂದೂಗಳಿಗೆ ಪೌರತ್ವ ಕಲ್ಪಿಸಬೇಕು, ಈ ಕುರಿತು ಅಮಿತ್ ಶಾ ನಡೆಸುತ್ತಿರುವ ರಾಜಕೀಯಕ್ಕೆ ವಿರಾಮ ನೀಡಬೇಕು" ಎಂದಿದ್ದರು. 

ಪೌರತ್ವ ತಿದ್ದುಪಡಿ ವಿಧೇಯಕ-2019 ಅಡಿ ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶದಲ್ಲಿ ಕಿರುಕುಳಕ್ಕೆ ಒಳಗಾಗಿ ಭಾರತಕ್ಕೆ ವಲಸೆ ಬಂದ ಹಿಂದೂ, ಸಿಖ್, ಕ್ರಿಶ್ಚಿಯನ್, ಪಾರಸಿ, ಜೈನ ಹಾಗೂ ಬೌದ್ಧ ಸಮುದಾಯದ  ಜನರಿಗೆ ಭಾರತೀಯ ಪೌರತ್ವ ನೀಡುವ ಕುರಿತು ಉಲ್ಲೇಖಿಸಲಾಗಿದೆ.