ಪೌರತ್ವ ತಿದ್ದುಪಡಿ ಮಸೂದೆ ರಾಜ್ಯ ಸಭೆಯಲ್ಲಿ ಮಂಡನೆ, ಏನಂದ್ರು ಅಮಿತ್ ಶಾ?
ಶರಣಾರ್ಥಿಗಳು ಭಾರತಕ್ಕೆ ಪ್ರವೇಶಿಸಿದ ದಿನದಿಂದಲೇ ಅವರಿಗೆ ನಾಗರಿಕತ್ವ ಒದಗಿಸಲಾಗುವುದು ಮತ್ತು ಅವರ ಉದ್ಯಮಗಳನ್ನು ಖಾಯಂಗೊಳಿಸಲಾಗುವುದು ಎಂದು ಶಾ ಹೇಳಿದ್ದಾರೆ.
ನವದೆಹಲಿ: ಇಂದು ಮಧ್ಯಾಹ್ನ 12ಗಂಟೆಗೆ ರಾಜ್ಯಸಭೆಯಲ್ಲಿ ಪೌರತ್ವ ತಿದ್ದುಪಡಿ ಮಸೂದೆ-2019ನ್ನು ಮಂಡಿಸಲಾಗಿದೆ. 12ಗಂಟೆಗೆ ರಾಜ್ಯಸಭೆಯ ಕಾರ್ಯಕಲಾಪ ಆರಂಭವಾಗುತ್ತಿದ್ದಂತೆ, ಈ ಮಸೂದೆಯ ಕುರಿತು ಚರ್ಚೆ ಕೂಡ ಆರಂಭಗಾಗಿದೆ. ಮಸೂದೆ ಮಂಡಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಇದು ಶರಣಾರ್ಥಿಗಳಿಗೆ ಹಕ್ಕು ಹಾಗೂ ಸನ್ಮಾನ ಕಲ್ಪಿಸುವ ಮಸೂದೆಯಾಗಿದೆ. ಕೋಟ್ಯಂತರ ವಲಸಿಗರು ಈ ಪೌರತ್ವ ಮಸೂದೆ ಬಗ್ಗೆ ಸಾಕಷ್ಟು ನಿರೀಕ್ಷೆ ಹೊಂದಿದ್ದಾರೆ ಎಂದಿದ್ದಾರೆ.
ಈ ವೇಳೆ ಶರಣಾರ್ಥಿಗಳು ಭಾರತಕ್ಕೆ ಪ್ರವೇಶಿಸಿದ ದಿನದಿಂದಲೇ ಅವರಿಗೆ ನಾಗರಿಕತ್ವ ಒದಗಿಸಲಾಗುವುದು ಮತ್ತು ಅವರ ಉದ್ಯಮಗಳನ್ನು ಖಾಯಂಗೊಳಿಸಲಾಗುವುದು ಎಂದು ಶಾ ಹೇಳಿದ್ದಾರೆ. ಈ ವೇಳೆ ನೀವು ವೋಟ್ ಬ್ಯಾಂಕ್ ರಾಜಕೀಯ ಮಾಡುತ್ತಿರುವಿರಿ ಎಂದು ಆರೋಪಿಸಿದ್ದ ಪ್ರತಿಪಕ್ಷಗಳಿಗೆ ತಿರುಗೇಟು ನೀಡಿರುವ ಶಾ, ಜನರು ಈ ಮಸೂದೆಯನ್ನು ಜನರು ಒಪ್ಪಿಕೊಂಡಿದ್ದಾರೆ ಹಾಗೂ ಪ್ರಜಾಪ್ರಭುತ್ವದಲ್ಲಿ ಜನಾದೇಶಕ್ಕಿಂತ ದೊಡ್ಡದು ಯಾವುದು ಇಲ್ಲ ಎಂದಿದ್ದಾರೆ.
ಈ ಮಸೂದೆ ದೇಶದ ಮುಸ್ಲಿಮರಿಗೆ ವಿರುದ್ಧವಾಗಿದೆ ಎಂದು ಹೇಳುತ್ತಿರುವ ಕೆಲವರು ದೇಶದ ಜನರನ್ನು ತಪ್ಪುದಾರಿಗೆ ಎಳೆಯಲು ಯತ್ನಿಸುತ್ತಿದ್ದು, ಹೇಗೆ ಈ ಮಸೂದೆ ದೇಶದ ಮುಸ್ಲಿಮರಿಗೆ ಅನ್ಯಾಯ ಮಾಡುತ್ತಿದೆ ಹೇಳಿ? ಎಂದು ಪ್ರಶ್ನಿಸಿದ್ದಾರೆ.
ಇಂತವರ ಮಾತಿಗೆ ಕಿವಿಗೊಡಬೇಡಿ ಎಂದು ದೇಶದ ಮುಸ್ಲಿಮರಿಗೆ ಕರೆ ನೀಡಿರುವ ಗೃಹ ಸಚಿವರು, ಶರಣಾರ್ಥಿಗಳು ಭಾರತಕ್ಕೆ ಗಡಿ ಪ್ರವೇಶಿಸಿದ ದಿನದಿಂದಲೇ ಅವರಿಗೆ ಈ ದೇಶದ ನಾಗರಿಕತ್ವ ನೀಡಲಾಗುವುದು ಮತ್ತು ಅವರ ಉದ್ಯಮಗಳಿಗೆ ಮಾನ್ಯತೆ ಕೂಡ ಒದಗಿಸಲಾಗುವುದು ಎಂದಿದ್ದಾರೆ.
ಈ ವೇಳೆ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶಗಳಲ್ಲಿ ಅಲ್ಪಸಂಖ್ಯಾತರ ಸಂಖ್ಯೆ ಇಳಿಮುಖವಾಗಿದ್ದು, ಅಲ್ಲಿ ಕಿರುಕುಳದಿಂದ ಬೇಸತ್ತು ಭಾರತ ಪ್ರವೇಶಿಸಿದವರಿಗೋಸ್ಕರ ಈ ಮಸೂದೆ ತರಲಾಗಿದ್ದು, ಇದು ಅವರಿಗೆ ಸಮಾನತೆಯ ಹಕ್ಕು ನೀಡುತ್ತದೆ ಎಂದಿದ್ದಾರೆ.
ಅಮಿತ್ ಶಾ ಅವರ ಭಾಷಣದ ಹೈಲೈಟ್ಸ್
ಐತಿಹಾಸಿಕ ಮಸೂದೆಯೊಂದಿಗೆ ನಾನು ನಿಮ್ಮ ಮುಂದೆ ಉಪಸ್ಥಿತನಾಗಿರುವೆ
ಲಕ್ಷಾಂತರ, ಕೋಟ್ಯಾಂತರ ಜನರು ನೋವಿನಿಂದ ಬದಕುತ್ತಿದ್ದಾರೆ. ಅವರಿಗೆ ಹೊಸ ಚೈತನ್ಯ ತುಂಬುವ ಬಿಲ್ ಇದಾಗಿದೆ.
ದೇಶ ವಿಭಜನೆಯ ಬಳಿಕ ಉಭಯ ದೇಶಗಳಲ್ಲಿ ಇರುವ ಅಲ್ಪಸಂಖ್ಯಾತರು ಗೌರವಯುತವಾಗಿ ಜೀವಿಸಲಿದ್ದಾರೆ ಎಂಬುದನ್ನು ಕಲ್ಪಿಸಲಾಗಿತ್ತು.
ಆದರೆ ಹಲವಾರು ದಶಕಗಳ ಬಳಿಕ ಹಿಂದಿರುಗಿ ನೋಡಿದಾಗ, ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶಗಳಲ್ಲಿ ಈ ಅಲ್ಪಸಂಖ್ಯಾತರಿಗೆ ಇನ್ನೂ ಸಮಾನತೆಯ ಹಕ್ಕು ಸಿಕ್ಕಿಲ್ಲ.
ಪೂರ್ವ ಪಾಕಿಸ್ತಾನದಲ್ಲಿ ಬನ್ ಹಾಗೂ ಮುಜೀಬ್ ಅವರು ಇದಕ್ಕಾಗಿ ಶ್ರಮಿಸಿದರು ಆದರೆ, ದುರದೃಷ್ಟವಶಾತ್ ಅವರ ಹತ್ಯೆ ಮಾಡಲಾಯಿತು ಹಾಗೂ ದೀರ್ಘ ಕಾಲದವರೆಗೆ ಅಲ್ಲಿ ಅಲ್ಪಸಂಖ್ಯಾತರು ಶೋಷಣೆಗೆ ಒಳಗಾದರು.
ಅಲ್ಲಿ ಅಲ್ಪಸಂಖ್ಯಾತರ ಸಂಖ್ಯೆ ಇಂದು ಕಡಿಮೆಯಾಗಿದೆ. ಅವರನ್ನು ಹತ್ಯೆಗೈಯಲಾಗಿದೆ ಅಥವಾ ಅವರ ಧರ್ಮ ಪರಿವರ್ತಿಸಲಾಗಿದೆ.
ಇದರಿಂದ ಪಾರಾಗಿ ಭಾರತಕ್ಕೆ ಬಂದ ವಲಸಿಗರಿಗೆ ಇದುವರೆಗೆ ಸೌಲಭ್ಯವೂ ಸಿಕ್ಕಿಲ್ಲ ಹಾಗೂ ನಾಗರಿಕತ್ವವೂ ಸಿಕ್ಕಿಲ್ಲ
ಈ ಮಸೂದೆ ಧರ್ಮದ ಆಧಾರದ ಮೇಲೆ ಶೋಷಣೆಗೆ ಒಳಗಾದವರಿಗೆ ನ್ಯಾಯ ನೀಡಲಿದೆ.
2019ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯ ವೇಳೆ ಬಿಜೆಪಿ ಹಾಗೂ ಇತರೆ ಮೈತ್ರಿಪಕ್ಷಗಳು ಈ ಕುರಿತು ಘೋಷಣೆ ಪತ್ರ ಬಿಡುಗಡೆಗೊಳಿಸಿದ್ದವು.
ಮಲ್ಟಿ ಪಾರ್ಟಿ ಡೆಮೋಕ್ರಾಸಿಯಲ್ಲಿ ಘೋಷಣಾ ಪತ್ರ ಸರ್ಕಾರ ರಚಿಸುವ ಪಕ್ಷಗಳ ಘೋಷಣೆಯಾಗಿರುತ್ತದೆ.
ಬಿಜೆಪಿ ತನ್ನ ಘೋಷಣಾಪತ್ರದಲ್ಲಿ ಈ ಕುರಿತು ಘೋಷಿಸಿತ್ತು.
ವೋಟ್ ಬ್ಯಾಂಕ್ ರಾಜಕೀಯ ಮಾಡುತ್ತಿರುವಿರಿ ಎನ್ನುವ ಎಲ್ಲರಿಗೂ ನಾನು ಹೇಳಬಯಸುತ್ತೇನೆ "ದೇಶದ ಜನತೆ ಈ ಮಸೂದೆಗೆ ಸಮರ್ಥನೆ ನೀಡಿದ್ದಾರೆ ಹಾಗೂ ಪ್ರಜಾಪ್ರಭುತ್ವದಲ್ಲಿ ಜನಾದೇಶಕ್ಕಿಂತ ದೊಡ್ಡದು ಯಾವುದು ಇಲ್ಲ"
ಭಾರತದಲ್ಲಿ ನೆಲಸಿರುವ ಮುಸ್ಲಿಮರು ಇಲ್ಲಿಯೇ ಇರಲಿದ್ದಾರೆ, ಅವರಿಗೆ ಯಾರು ಕಿರುಕುಳ ನೀಡುವುದಿಲ್ಲ.
ಯಾರೇ ನಿಮ್ಮನ್ನು ಭಯಪಡಿಸಿದರೆ, ಹೆದರಬೇಡಿ. ಇದು ನರೇಂದ್ರ ಮೋದಿ ಸರ್ಕಾರ, ಎಲ್ಲರನ್ನು ಜೊತೆಗೆ ಕರೆದುಕೊಂಡು ಹೋಗುತ್ತದೆ.
ಯಾರೊಬ್ಬರ ತಪ್ಪು ಮಾತಿಗೆ ಕಿವಿಗೊಡಬೇಡಿ.
ಯಾರೇ ದಬಾಯಿಸಿದರು ಅಥವಾ ಬೆದರಿಸಿದರು ಮುಸ್ಲಿಮರು ಹೆದರಬೇಡಿ.
ನೆರೆರಾಷ್ಟ್ರಗಳಿಂದ ಬಂದ ಮುಸ್ಲಿಮರಿಗೂ ಕೂಡ ಸಂರಕ್ಷಣೆ ಕಲ್ಪಿಸಲಾಗುವುದು.