ಯುಪಿಎಸ್ಸಿ ಪ್ರಶ್ನೆಪತ್ರಿಕೆಯಲ್ಲಿ `ಸೆಕ್ಯುಲರಿಸಂ` ಕುರಿತ ವಿವಾದಾತ್ಮಕ ಪ್ರಶ್ನೆ
ಯುಪಿಎಸ್ಸಿ ನಡೆಸಿಕೊಡುವ ದೇಶದ ಪ್ರತಿಷ್ಠಿತ ನಾಗರಿಕ ಸೇವಾ ಪರೀಕ್ಷೆಯಲ್ಲಿ ಈಗ ಜ್ಯಾತ್ಯಾತೀತತೆ ಕುರಿತಾಗಿ ಕೇಳಿರುವ ಪ್ರಶ್ನೆ ಸಾಕಷ್ಟು ವಿವಾದವನ್ನು ಸೃಷ್ಟಿಸಿದೆ.
ನವದೆಹಲಿ: ಯುಪಿಎಸ್ಸಿ ನಡೆಸಿಕೊಡುವ ದೇಶದ ಪ್ರತಿಷ್ಠಿತ ನಾಗರಿಕ ಸೇವಾ ಪರೀಕ್ಷೆಯಲ್ಲಿ ಈಗ ಜ್ಯಾತ್ಯಾತೀತತೆ ಕುರಿತಾಗಿ ಕೇಳಿರುವ ಪ್ರಶ್ನೆ ಸಾಕಷ್ಟು ವಿವಾದವನ್ನು ಸೃಷ್ಟಿಸಿದೆ.
ಐಎಎಸ್, ಐಎಫ್ಎಸ್ ಮತ್ತು ಐಪಿಎಸ್ ನಂತಹ ಪ್ರಮುಖ ಸೇವೆಗಳ ನೇಮಕಾತಿಗಾಗಿ ನಡೆಯುವ ಎರಡನೇ ಹಂತವಾಗಿರುವ ಮುಖ್ಯಪರೀಕ್ಷೆಯಲ್ಲಿ 'ಜಾತ್ಯತೀತತೆಯ ಹೆಸರಿನಲ್ಲಿ ನಮ್ಮ ಸಾಂಸ್ಕೃತಿಕ ಆಚರಣೆಗಳಿಗೆ ಇರುವ ಸವಾಲುಗಳೇನು? ಎನ್ನುವ ಪ್ರಶ್ನೆಯನ್ನು ಕೇಳಲಾಗಿದೆ. ಈ ಪ್ರಶ್ನೆಗೆ 150 ಪದಗಳಲ್ಲಿ ಉತ್ತರಿಸಲು ಹೇಳಲಾಗಿದೆ.
ಈ ಪ್ರಶ್ನೆಯು ಭಾರತೀಯ ಸಂವಿಧಾನದಲ್ಲಿ ಪ್ರತಿಪಾದಿಸಿರುವ ಜಾತ್ಯತೀತತೆಯ ತತ್ವವನ್ನು ತಿರಸ್ಕರಿಸುತ್ತದೆ ಎಂದು ಹಲವರು ಸಾಮಾಜಿಕ ಮಾಧ್ಯಮದಲ್ಲಿ ಯುಪಿಎಸ್ಸಿ ಪ್ರಶ್ನೆ ಬಗ್ಗೆ ಟೀಕಾ ಪ್ರಹಾರ ನಡೆಸಿದ್ದಾರೆ. ಯುಪಿಎಸ್ಸಿ ಸೆಪ್ಟೆಂಬರ್ 20 ರಿಂದ ಸೆಪ್ಟೆಂಬರ್ 29 ರವರೆಗೆ ಸಿವಿಲ್ ಸರ್ವೀಸಸ್ (ಮುಖ್ಯ) ಪರೀಕ್ಷೆಯನ್ನು ನಡೆಸುತ್ತಿದೆ. ಪರೀಕ್ಷೆಯು ಅಭ್ಯರ್ಥಿಯ ವಿವಿಧ ವಿಷಯಗಳ ಬಗ್ಗೆ ಸಾಮಾನ್ಯ ಜ್ಞಾನದ ಆಳವನ್ನು ಪರೀಕ್ಷಿಸುತ್ತದೆ.
ಈಗ ಪ್ರಶ್ನೆಯನ್ನು ಕೇಳಿರುವ ರೀತಿಗೆ ಆಕ್ರೋಶ ವ್ಯಕ್ತಪಡಿಸಿ ಟ್ವೀಟ್ ಮಾಡಿರುವ ಕಣ್ಣನ್ ಗೋಪಿನಾಥ್ 'ಭಾರತದ ಜ್ಯಾತ್ಯಾತೀತತೆಯು ಸಕಾರಾತ್ಮಕ ವಿಷಯವಾಗಿದ್ದು, ಇದು ಎಲ್ಲ ಸಾಂಸ್ಕೃತಿಕ ಅಭ್ಯಾಸಗಳನ್ನು ಗಣನೆಗೆ ತೆಗೆದುಕೊಳ್ಳುವುದರ ಮೂಲಕ ವೈಜ್ಞಾನಿಕ ಮನೋಭಾವವನ್ನು ಮೂಡಿಸುವುದಲ್ಲದೆ ಮೂಢನಂಬಿಕೆ ಮತ್ತು ಆಚರಣೆಗಳನ್ನು ಅದು ವಿರೋಧಿಸುತ್ತದೆ' ನನ್ನ ಉತ್ತರ ವ್ಯಾಕ್ಯದ ಮೊದಲನೇದ್ದು' ಎಂದು ಅಜ್ಮಲ್ ಆರಾಮ್ ಎನ್ನುವವರು ಪ್ರಶ್ನೆ ಪತ್ರಿಕೆಯನ್ನು ಉಲ್ಲೇಖಿಸಿ ಮಾಡಿರುವ ಟ್ವೀಟ್ ಗೆ ಪ್ರತಿಕ್ರಿಯಿಸಿದ್ದಾರೆ.
ಈ ವರ್ಷ ಮುಖ್ಯ ಪರೀಕ್ಷೆಗೆ 11,845 ಅಭ್ಯರ್ಥಿಗಳನ್ನು ಪ್ರಾಥಮಿಕ ಪರೀಕ್ಷೆ ಆಧಾರದ ಮೇಲೆ ಆಯ್ಕೆ ಮಾಡಲಾಗಿದೆ.