ಅಯೋಧ್ಯೆ ವಿವಾದ ತೀರ್ಪು ಹಿನ್ನೆಲೆ: ವಿದೇಶ ಪ್ರವಾಸ ರದ್ದುಗೊಳಿಸಿದ ಸಿಜೆಐ ರಂಜನ್ ಗೊಗೊಯ್
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರು ಅಕ್ಟೋಬರ್ ಬಳಿಕ ತಮ್ಮ ವಿದೇಶ ಪ್ರವಾಸವನ್ನು ರದ್ದುಗೊಳಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ನವದೆಹಲಿ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರು ಅಕ್ಟೋಬರ್ ಬಳಿಕ ತಮ್ಮ ವಿದೇಶ ಪ್ರವಾಸವನ್ನು ರದ್ದುಗೊಳಿಸಲು ನಿರ್ಧರಿಸಿದ್ದಾರೆ ಎಂದು ಮಾಧ್ಯಮ ವರದಿಗಳು ಗುರುವಾರ ತಿಳಿಸಿವೆ.
ಅಕ್ಟೋಬರ್ 18ರಂದು ದುಬೈಗೆ ಭೇಟಿ ನೀಡಬೇಕಿದ್ದ ಸಿಜೆಐ ರಂಜಾನ್ ಗೊಗೊಯ್ ಅವರು, ಅಲ್ಲಿಂದ ಕೈರೋ, ಬ್ರೆಜಿಲ್ ಮತ್ತು ನ್ಯೂಯಾರ್ಕ್ ನಲ್ಲಿ ನಡೆಯಲಿರುವ ಕೆಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಅಕ್ಟೋಬರ್ 31 ರಂದು ಭಾರತಕ್ಕೆ ಮರಳಲು ಸಿದ್ಧತೆ ಯೋಜಿಸಿದ್ದರು. ಆದರೆ, ಇತ್ತೀಚಿನ ವರದಿಗಳ ಪ್ರಕಾರ, ಬಹು ರಾಷ್ಟ್ರಗಳ ಭೇಟಿ ಕಾರ್ಯಕ್ರಮ ರದ್ದಾಗಿದೆ ಎನ್ನಲಾಗಿದೆ.
ಅಯೋಧ್ಯೆ ಭೂ ವಿವಾದ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಸುಪ್ರೀಂ ಕೋರ್ಟ್‌ನ ಐದು ನ್ಯಾಯಾಧೀಶರ ಸಂವಿಧಾನ ಪೀಠದ ಮುಖ್ಯಸ್ಥರಾದ ಗೊಗೊಯ್, ಪ್ರಕರಣದ 40 ದಿನಗಳ ವಿಚಾರಣೆಯ ನಂತರ ಗುರುವಾರ ತನ್ನ ತೀರ್ಪನ್ನು ಕಾಯ್ದಿರಿಸಿದೆ.
ಪ್ರಕರಣದ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಶರದ್ ಅರವಿಂದ್ ಬೊಬ್ಡೆ, ಅಶೋಕ್ ಭೂಷಣ್, ಡಿ ವೈ ಚಂದ್ರಚೂಡ್ ಮತ್ತು ಎಸ್ ಅಬ್ದುಲ್ ನಜೀರ್ ಮತ್ತು ಸಿಜೆಐ ರಂಜನ್ ಗೊಗೊಯ್ ಅವರನ್ನೊಳಗೊಂಡ ಐವರು ನ್ಯಾಯಾಧೀಶರ ಸಂವಿಧಾನ ಪೀಠ ನಡೆಸಿದೆ.
ಮುಖ್ಯ ನ್ಯಾಯಮೂರ್ತಿ ನವೆಂಬರ್ 17ರಂದು ನಿವೃತ್ತಿಯಾಗುವುದರಿಂದ ನವೆಂಬರ್ 4-15ರ ನಡುವೆ ಈ ತೀರ್ಪನ್ನು ಸುಪ್ರೀಂ ಕೋರ್ಟ್ ಪ್ರಕಟಿಸುವ ಸಾಧ್ಯತೆಯಿದೆ.