ಅಲಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿ ವಜಾಗೊಳಿಸುವಂತೆ ಪ್ರಧಾನಿಗೆ ಸಿಜೆಐ ಪತ್ರ
ಸಮಿತಿಯ ವರದಿಯ ನಂತರ, ಅಂದಿನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ಕಾರ್ಯವಿಧಾನದ ಪ್ರಕಾರ, ನ್ಯಾಯಮೂರ್ತಿ ಶುಕ್ಲಾ ಅವರಿಗೆ ರಾಜೀನಾಮೆ ನೀಡಬೇಕು ಅಥವಾ ಸ್ವಯಂಪ್ರೇರಿತ ನಿವೃತ್ತಿ ತೆಗೆದುಕೊಳ್ಳುವಂತೆ ಸಲಹೆ ನೀಡಿದರು.
ನವದೆಹಲಿ: ಅಲಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿ ಎಸ್.ಎನ್. ಶುಕ್ಲಾ ಅವರ ವಿರುದ್ಧ ಕೇಳಿಬಂದಿದ್ದ ಆರೋಪದಲ್ಲಿ ಅವರು ತಪ್ಪಿತಸ್ಥರೆಂದು ಸಾಬೀತಾದ ಹಿನ್ನೆಲೆಯಲ್ಲಿ ಮುಖ್ಯ ನ್ಯಾಯಮೂರ್ತಿ (ಸಿಜೆಐ) ರಂಜನ್ ಗೊಗೊಯ್ ಅವರು ಪ್ರಧಾನ ಮಂತ್ರಿಗೆ ಪತ್ರ ಬರೆದಿದ್ದು, ಶುಕ್ಲಾ ಅವರನ್ನು ಸೇವೆಯಿಂದ ತೆಗೆದುಹಾಕಲು ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ.
ನ್ಯಾಯಮೂರ್ತಿ ಶುಕ್ಲಾ ವಿರುದ್ಧದ ದೂರಿನಲ್ಲಿ ಸಾಕಷ್ಟು ಸತ್ಯಾಂಶವಿದ್ದು, ಅದನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಮೂವರು ಸದಸ್ಯರ ಆಂತರಿಕ ಸಮಿತಿಯು 2018 ರ ಜನವರಿಯಲ್ಲಿ ವರದಿ ನೀಡಿದೆ. ಶುಕ್ಲಾ ಅವರ ಆರೋಪಗಳು ಸಾಬೀತಾಗಿರುವ ಹಿನ್ನೆಲೆಯಲ್ಲಿ ನ್ಯಾ. ಶುಕ್ಲಾ ಅವರನ್ನು ವಜಾಗೊಳಿಸಲು ಪ್ರಕ್ರಿಯೆ ಆರಂಭಿಸುವಂತೆ ಗೊಗೋಯ್ ಅವರು ಪ್ರಧಾನಿಗೆ ಪತ್ರದಲ್ಲಿ ಮನವಿ ಮಾಡಿದ್ದಾರೆ. ಈ ಸಮಿತಿಯಲ್ಲಿ ಮದ್ರಾಸ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ, ಸಿಕ್ಕಿಂ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಅಗ್ನಿಹೋತ್ರಿ ಮತ್ತು ಮಧ್ಯಪ್ರದೇಶದ ಹೈಕೋರ್ಟ್ ನ್ಯಾಯಮೂರ್ತಿ ಪಿ.ಕೆ.ಜೈಸ್ವಾಲ್ ಇದ್ದರು.
2018ರಲ್ಲಿ ಈ ಸಮಿತಿಯು ನ್ಯಾ. ಶುಕ್ಲಾ ಅವರ ವಿರುದ್ಧದ ಆರೋಪಗಳಿಗೆ ಸಾಕ್ಷ್ಯಾಧಾರಗಳು ಇವೆ ಎಂದು ಹೇಳಿತ್ತು. ನಂತರ ಅಂದಿನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ಕಾರ್ಯವಿಧಾನದ ಪ್ರಕಾರ, ನ್ಯಾಯಮೂರ್ತಿ ಶುಕ್ಲಾ ಅವರಿಗೆ ರಾಜೀನಾಮೆ ನೀಡಬೇಕು ಅಥವಾ ಸ್ವಯಂಪ್ರೇರಿತ ನಿವೃತ್ತಿ ತೆಗೆದುಕೊಳ್ಳುವಂತೆ ಸಲಹೆ ನೀಡಿದರು. ನ್ಯಾ. ಶುಕ್ಲಾ ಅದಕ್ಕೆ ಒಪ್ಪದಿದ್ದಾಗ ಅವರಿಗೆ ಯಾವುದೇ ನ್ಯಾಯಾಂಗದ ಕೆಲಸಗಳನ್ನು ವಹಿಸದಂತೆ ಅಲಹಾಬಾದ್ ಹೈಕೋರ್ಟ್‌ಗೆ ಸೂಚಿಸಿದ್ದರು.
ನಂತರ ದೀರ್ಘಕಾಲ ರಜೆಯ ಮೇಲೆ ತೆರಳಿದ್ದ ನ್ಯಾಯಮೂರ್ತಿ ಶುಕ್ಲಾ ಅವರು ಮಾರ್ಚ್ 23 ರಂದು ಹೈಕೋರ್ಟ್‌ಗೆ ನ್ಯಾಯಾಂಗ ಕೆಲಸ ಮಾಡಲು ಅವಕಾಶ ನೀಡುವಂತೆ ಸಿಜೆಐ ಗೊಗೊಯ್ ಅವರಿಗೆ ಪತ್ರ ಬರೆದಿದ್ದರು. ಈ ಪತ್ರವನ್ನು ಅಲಹಾಬಾದ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸಿಜೆಐ ಗೊಗೊಯ್ ಅವರಿಗೆ ರವಾನಿಸಿದ್ದರು.
ಇದೀಗ ಸಿಜೆಐ ಗೊಗೊಯ್ ಅವರು ಪ್ರಧಾನ ಮಂತ್ರಿಗೆ ಬರೆದ ಪತ್ರದಲ್ಲಿ, "ನ್ಯಾಯಮೂರ್ತಿ ಶುಕ್ಲಾ ವಿರುದ್ಧದ ಆಂತರಿಕ ವಿಚಾರಣಾ ಸಮಿತಿಯು ಗಂಭೀರ ಆರೋಪಗಳಿಗೆ ಸಾಕ್ಷ್ಯಾಧಾರಗಳನ್ನೂ ಒದಗಿಸಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಸೇವೆಯಿಂದ ವಜಾಗೊಳಿಸಲು ಪ್ರಕ್ರಿಯೆ ಆರಂಭಿಸಬೇಕು. ಅವರನ್ನು ಯಾವುದೇ ಹೈಕೋರ್ಟ್‌ನಲ್ಲಿ ನ್ಯಾಯಾಂಗ ಕೆಲಸ ಮಾಡಲು ಅನುಮತಿಸಬಾರದು. ಈ ಸಂದರ್ಭಗಳಲ್ಲಿ, ಮುಂದಿನ ಕ್ರಮವನ್ನು ಪರಿಗಣಿಸಲು ನಿಮ್ಮನ್ನು ಕೋರಲಾಗಿದೆ ಎಂದು ತಿಳಿಸಿದ್ದಾರೆ.
ಸುಪ್ರೀಂಕೋರ್ಟ್‌ನ ಸಿಜೆಐ ನೀತಿ ಪೀಠದ ಆದೇಶಗಳನ್ನು ಉಲ್ಲಂಘಿಸಿದೆ ಎಂದು ಆರೋಪಿಸಿ 2017-18ರ ಶೈಕ್ಷಣಿಕ ವರ್ಷದಲ್ಲಿ ಖಾಸಗಿ ಕಾಲೇಜುಗಳಿಗೆ ವಿದ್ಯಾರ್ಥಿಗಳನ್ನು ನಾಮನಿರ್ದೇಶನ ಮಾಡಲು ಅವಕಾಶ ನೀಡಿದಾಗ ನ್ಯಾಯಮೂರ್ತಿ ಶುಕ್ಲಾ ಅವರು ಹೈಕೋರ್ಟ್‌ನಲ್ಲಿ ನ್ಯಾಯಪೀಠದ ಅಧ್ಯಕ್ಷತೆ ವಹಿಸಿದ್ದರು. ವೈದ್ಯಕೀಯ ಪ್ರವೇಶಾತಿಯಲ್ಲಿ ಭಾರೀ ಹಗರಣ ನಡೆದಿದೆ. ವೈದ್ಯಕೀಯ ಪ್ರವೇಶಾತಿ ಹಗರಣದಲ್ಲಿ ಸಾಕಷ್ಟು ಲೋಪ ದೋಷ ಉಂಟಾಗಿದ್ದು, ಇದರಲ್ಲಿ ಅಲಹಾಬಾದ್ ಹೈಕೋರ್ಟ್‍ನಲ್ಲಿ ನ್ಯಾಯಮೂರ್ತಿಯಾಗಿರುವ ಶುಕ್ಲಾ ಶಾಮೀಲಾಗಿದ್ದಾರೆ ಎಂದು ಆರೋಪಗಳು ಕೇಳಿಬಂದಿತ್ತು.
ಎಸ್.ಎನ್.ಶುಕ್ಲಾ ಮೇಲೆ ಕೇಳಿ ಬಂದಿರುವ ಆರೋಪಗಳು ಸತ್ಯಾಂಶದಿಂದ ಕೂಡಿವೆ. ಇದೊಂದು ಗಂಭೀರವಾದ ಪ್ರಕರಣವಾಗಿದ್ದು ನ್ಯಾಯಮೂರ್ತಿ ಸ್ಥಾನದಲ್ಲಿ ಮುಂದುವರೆಯಲು ಅರ್ಹರಲ್ಲ ಎಂದು ಮೂವರು ಸದಸ್ಯರ ಸಮಿತಿ ವರದಿ ನೀಡಿತ್ತು. ವಿಚಾರಣಾ ಸಮಿತಿಯ ವರದಿಯ ಪ್ರಕಾರ, ನ್ಯಾಯಮೂರ್ತಿ ಶುಕ್ಲಾ ಅವರು "ನ್ಯಾಯಾಂಗ ಮೌಲ್ಯಗಳನ್ನು ದುರ್ಬಲಗೊಳಿಸಿದ್ದಾರೆ, ನ್ಯಾಯದ ಪ್ರಕಾರ ನಡೆದುಕೊಂಡಿಲ್ಲ", "ಅದರ ಹುದ್ದೆಯ ಘನತೆ ಮತ್ತು ವಿಶ್ವಾಸಾರ್ಹತೆಯನ್ನು ಕಡಿಮೆ ಮಾಡಿದ್ದಾರೆ ಮತ್ತು ಪ್ರಮಾಣವಚನ ಉಲ್ಲಂಘಿಸಿದ್ದಾರೆ" ಎಂದು ಸಮಿತಿ ತನ್ನ ವರದಿಯಲ್ಲಿ ತಿಳಿಸಿದೆ.
"ಸಿಜೆಐ ಹೈಕೋರ್ಟ್ ಜಡ್ಜ್ ಅನ್ನು ತೆಗೆದುಹಾಕುವಂತೆ ರಾಷ್ಟ್ರಪತಿ ಮತ್ತು ಪ್ರಧಾನಮಂತ್ರಿಗೆ ಪತ್ರ ಬರೆದಾಗ, ರಾಜ್ಯಸಭೆಯ ಸಭಾಪತಿ, ಈ ಬಗ್ಗೆ ವಿಚಾರಣೆ ನಡೆಸಲು ಮೂವರು ಸದಸ್ಯರ ತನಿಖಾ ಸಮಿತಿಯನ್ನು ನೇಮಿಸುತ್ತಾರೆ." ರಾಜ್ಯಸಭೆಯ ಸಭಾಪತಿ ನೇಮಿಸಿದ ಸಮಿತಿಯು ಸಾಕ್ಷ್ಯಗಳು ಮತ್ತು ದಾಖಲೆಗಳನ್ನು ಪರಿಶೀಲಿಸುತ್ತದೆ. ನ್ಯಾಯಮೂರ್ತಿಗಳ ಮೇಲೆ ಹೊರಿಸಲಾಗಿರುವ ಆರೋಪ ಸತ್ಯವೇ? ಇಲ್ಲವೇ? ಅವರನ್ನು ಸೇವೆಯಿಂದ ತೆಗೆದುಹಾಕಬೇಕೆ? ಹೀಗೆ ಹಲವು ಆಯಾಮಗಳಲ್ಲಿ ಆ ಬಗ್ಗೆ ವಿಚಾರಣೆ ನಡೆಯುತ್ತದೆ. ವಿಚಾರಣೆಯ ಸಂದರ್ಭದಲ್ಲಿ ಸಿಗುವ ಆಧಾರದ ಮೇಲೆ ಸಮಿತಿ ತನ್ನ ವರದಿಯನ್ನು ನೀಡುತ್ತದೆ.