ಈದ್ ಪ್ರಾರ್ಥನೆ ಬಳಿಕ ಕಾಶ್ಮೀರದ ಹಲವೆಡೆ ಘರ್ಷಣೆ; ಮಹಿಳೆಯನ್ನು ಹತ್ಯೆಗೈದ ಉಗ್ರರು
ಬಾರಾಮುಲ್ಲಾ ಜಿಲ್ಲೆಯ ಸೋಪೋರ್ ಪಟ್ಟಣದಲ್ಲಿನ ಜಾಮಿಯಾ ಮಸೀದಿ ಬಳಿ ಘರ್ಷಣೆಗಳು ನಡೆದಿರುವ ಬಗ್ಗೆ ವರದಿಯಾಗಿದೆ.
ಜಮ್ಮು: ಈದ್ ಪ್ರಾರ್ಥನೆಗಳ ಬಳಿಕ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಬುಧವಾರ ಬೆಳಿಗ್ಗೆ ಯುವಕರು ಮತ್ತು ಜಮ್ಮು-ಕಾಶ್ಮೀರದ ಪೊಲೀಸರು ನಡುವೆ ಘರ್ಷಣೆಗಳು ಸಂಭವಿಸಿವೆ. ಶ್ರೀನಗರ, ಪುಲ್ವಾಮಾ, ಸೊಪೋರ್, ಬಾರಾಮುಲ್ಲಾ ಮತ್ತು ಕಣಿವೆಯ ಇತರ ಪ್ರದೇಶಗಳಲ್ಲಿನ ಘರ್ಷಣೆಯಲ್ಲಿ ಕಲ್ಲು ತೂರಾಟದ ಬಗ್ಗೆಯೂ ವರದಿಯಾಗಿದೆ. ಬಾರಾಮುಲ್ಲಾ ಜಿಲ್ಲೆಯ ಸೋಪೋರ್ ಪಟ್ಟಣದಲ್ಲಿನ ಜಾಮಿಯಾ ಮಸೀದಿ ಬಳಿ ಘರ್ಷಣೆಗಳು ನಡೆದವು.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಭದ್ರತಾ ಪಡೆಗಳೊಂದಿಗೆ ಘರ್ಷಣೆಗಿಳಿದಿರುವ ಯುವಕರು ಸ್ವಾತಂತ್ರ್ಯ ಮತ್ತು ಭಾರತ ವಿರೋಧಿ ಘೋಷಣೆಗಳನ್ನು ಕೂಗುತ್ತಿದ್ದರು. ಅಲ್ಲದೆ, ಮುಖವಾಡ ಧರಿಸಿದ್ದ ಕೆಲ ಯುವಕರು ಪಾಕಿಸ್ತಾನ ಮತ್ತು ಭಯೋತ್ಪಾದಕ ಸಂಘಟನೆಗಳ ಧ್ವಜಗಳನ್ನು ಹಾರಿಸಿದ್ದಾರೆ. ಅಷ್ಟೇ ಅಲ್ಲದೆ ಅವರು ರಸ್ತೆಯಲ್ಲಿ ಜಾಥಾ ಮಾಡಲು ಪ್ರಯತ್ನಿಸಿದರು. ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಲು ಟಿಯರ್ ಗ್ಯಾಸ್ ಶೆಲ್ಸ್ ಗಳನ್ನು ಬಳಸಬೇಕಾಯಿತು. ಅವರು ಪ್ರತಿಭಟನಾಕಾರರನ್ನು ಚದುರಿಸಲು ಪ್ರಯತ್ನಿಸುತ್ತಿರುವ ವೇಳೆ ಕಲ್ಲು ತೂರಾಟ ನಡೆಯಿತು. ಆ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು, ಹೆಚ್ಚುವರಿ ಪಡೆಗಳನ್ನು ಸಹ ನಿಯೋಜಿಸಲಾಗಿದೆ.
ಮತ್ತೊಂದು ಪ್ರತ್ಯೇಕ ಘಟನೆಯಲ್ಲಿ, ಗುರುತಿಸಲಾಗದ ಭಯೋತ್ಪಾದಕರು ಇಬ್ಬರು ನಾಗರಿಕರ ಮೇಲೆ ಗುಂಡು ಹಾರಿಸಿ ಮಹಿಳೆಯೊಬ್ಬರನ್ನು ಕೊಲೆಗೈದಿದ್ದಾರೆ. ಅಲ್ಲದೇ ರಾಜ್ಯದ ಪುಲ್ವಾಮಾ ಜಿಲ್ಲೆಯಲ್ಲಿ ಯುವಕರನ್ನು ತೀವ್ರವಾಗಿ ಗಾಯಗೊಳಿಸಿದರು. ಘಟನೆಯು ಜಿಲ್ಲೆಯ ಕಾಕಪೊರ ಪ್ರದೇಶದ ನರ್ಬಲ್ ಗ್ರಾಮದಲ್ಲಿ ನಡೆಯಿತು. ಯುವಕರನ್ನು ಚಿಕಿತ್ಸೆಗಾಗಿ ಶ್ರೀನಗರ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಮೃತ ಮಹಿಳೆಯನ್ನು ನಿಜೀನಾ ಬಾನೊ ಎಂದು ಮತ್ತು ತೀವ್ರವಾಗಿ ಗಾಯಗೊಂಡಿರುವ ಯುವಕನನ್ನು ಮೊಹಮ್ಮದ್ ಸುಲ್ತಾನ್ ಎಂದು ಗುರುತಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ. ಘಟನೆಯ ಬಗ್ಗೆ ತನಿಖೆ ಆರಂಭಿಸಲಾಗಿದೆ.