ಬೆಂಗಳೂರು: ಭಯೋತ್ಪಾದನೆಯಿಂದಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಹಲವು ವರ್ಷಗಳಿಂದ ಮುಚ್ಚಲ್ಪಟ್ಟಿದ್ದ ಸಾವಿರಾರು ಶಾಲೆಗಳು ಮತ್ತು ದೇವಾಲಯಗಳನ್ನು ಮತ್ತೆ ತೆರೆಯಲಾಗುವುದು ಎಂದು ಗೃಹ ವ್ಯವಹಾರಗಳ ರಾಜ್ಯ ಸಚಿವ ಜಿ.ಕಿಶನ್ ರೆಡ್ಡಿ ಸೋಮವಾರ ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ನಗರದಲ್ಲಿಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಜಮ್ಮು ಮತ್ತು ಕಾಶ್ಮೀರದಲ್ಲಿ ಹಲವು ವರ್ಷಗಳಿಂದ ಸುಮಾರು 50,000 ದೇವಾಲಯಗಳು, ಶಾಲೆಗಳು ಮುಚ್ಚಲ್ಪಟ್ಟಿವೆ. ವಿಗ್ರಹಗಳು ನಾಶವಾಗಿವೆ. ಈ ನಿಟ್ಟಿನಲ್ಲಿ ಅವುಗಳ ಮರುಸ್ಥಾಪನೆ ಮಾಡುವ ಅಥವಾ ತೆರೆಯುವ ಉದ್ದೇಶದಿಂದ ಸಮೀಕ್ಷೆ ನಡೆಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಜಿ.ಕಿಶನ್ ರೆಡ್ಡಿ ಹೇಳಿದರು.


"ಕಾಶ್ಮೀರದಲ್ಲಿ ಮುಚ್ಚಲಾಗಿರುವ ದೇವಾಲಯಗಳು ಮತ್ತು ಶಾಲೆಗಳ ಸಮೀಕ್ಷೆಗೆ ಆದೇಶಿಸಲಾಗಿದೆ. ಅವುಗಳನ್ನು ಮತ್ತೆ ತೆರೆಯುತ್ತೇವೆ. ಕಾಶ್ಮೀರ ಕಣಿವೆಯಲ್ಲಿ ಯಾವುದೇ ಚಿತ್ರಮಂದಿರಗಳಿಲ್ಲ. ಹಾಗಾಗಿ ಅವುಗಳನ್ನು ಮತ್ತೆ ತೆರೆಯುವ ಬಗ್ಗೆ ಯೋಚಿಸುತ್ತಿದ್ದೇವೆ" ಎಂದು ನುಡಿದರು.


"ಕಾಶ್ಮೀರದಲ್ಲಿ ಸಾಕಷ್ಟು ಸರ್ಕಾರಿ ಭೂಮಿ ಲಭ್ಯವಿದೆ. ಹಾಗಾಗಿ ಹೂಡಿಕೆ ಮಾಡಲು ಬಯಸುವವರು ಭೂಮಿಯನ್ನು ಖರೀದಿಸುವ ಅಗತ್ಯವಿಲ್ಲ. ನಾವು ನಿಡುವ ಸರ್ಕಾರಿ ಭೂಮಿಯಲ್ಲೇ ಅವರು ಸಂಸ್ಥೆಗಳನ್ನು ತೆರೆಯಬಹುದು. ರಾಜ್ಯದ ಪ್ರತಿ ಹಳ್ಳಿಯಿಂದ 5 ಜನರನ್ನು ಸರ್ಕಾರಿ ಹುದ್ದೆಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಸೈನ್ಯ , ನೌಕಾಪಡೆ ಮತ್ತು ವಾಯುಪಡೆಯು ಸಹ ನೇಮಕಾತಿಗೆ ಚಾಲನೆ ನೀಡಲು ಯೋಜಿಸುತ್ತಿವೆ. ಜಮ್ಮು ಮತ್ತು ಕಾಶ್ಮೀರದಲ್ಲಿ ನಾವು ವಿಶ್ವವಿದ್ಯಾಲಯಗಳನ್ನು ತೆರೆಯಲು ಹಾಗೂ ಪ್ರವಾಸೋದ್ಯಮವನ್ನು ಉತ್ತೇಜಿಸಲು ನಾವು ನಿರ್ಧರಿಸಿದ್ದೇವೆ "ಎಂದು ಅವರು ಹೇಳಿದರು.


ಹಿಂದಿನ ಜಮ್ಮು ಮತ್ತು ಕಾಶ್ಮೀರ ಸರ್ಕಾರಕ್ಕೆ ಕೇಂದ್ರ ನೀಡಿದ ಹಣದ ಬಗ್ಗೆ ತನಿಖೆ ನಡೆಸುವ ಭ್ರಷ್ಟಾಚಾರ ನಿಗ್ರಹ ದಳ ಘಟಕವನ್ನು ರಾಜ್ಯದಲ್ಲಿ ಸ್ಥಾಪಿಸಲಾಗಿದೆ ಎಂದ ರೆಡ್ಡಿ, ಇದುವರೆಗೂ ಜಮ್ಮು ಸರ್ಕಾರಕ್ಕೆ ಕೇಂದ್ರ ಸರ್ಕಾರ ಕೋಟ್ಯಂತರ ಹಣ ನೀಡಿದೆ. ಆದರೆ ಅದನ್ನು ಅಲ್ಲಿನ ಸರ್ಕಾರ ಅಭಿವೃದ್ಧಿ ಕಾರ್ಯಗಳಿಗೆ ಬಳಸಿಲ್ಲ. ಈ ಬಗ್ಗೆ ಎಸಿಬಿ ತೀವ್ರ ತನಿಖೆ ನಡೆಸಲಿದೆ ಎಂದು ಹೇಳಿದರು.