ಅಮರಾವತಿ: ತನ್ನ ಚಿಕ್ಕಪ್ಪ ವೈ.ಎಸ್.ವಿವೇಕಾನಂದ ರೆಡ್ಡಿ ಕೊಲೆಯ ಹಿಂದೆ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಕೈವಾಡವಿದೆ ಎಂದು ವೈಎಸ್ಆರ್ ಕಾಂಗ್ರೆಸ್ ನಾಯಕ ಜಗನ್ ಮೋಹನ್ ರೆಡ್ಡಿ ಆರೋಪಿಸಿದ್ದಾರೆ.


COMMERCIAL BREAK
SCROLL TO CONTINUE READING

ಶುಕ್ರವಾರ ಬೆಳಿಗ್ಗೆ ವೈಎಸ್ಆರ್ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ ವೈ.ಎಸ್. ವಿವೇಕಾನಂದ ರೆಡ್ಡಿ ಅವರು ಕಡಪ ಜಿಲ್ಲೆಯ ಪುಲಿವೆಂದುಲದ ನಿವಾಸದಲ್ಲಿ ಮೃತಪಟ್ಟಿರುವುದು ತಿಳಿದುಬಂದಿತ್ತು. ಅವರ ಕೋಣೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು ಎನ್ನಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ, ಗುರುವಾರ ರಾತ್ರಿ 11.30ರಿಂದ ಬೆಳಗಿನ ಜಾವ 5 ಗಂಟೆಯ ಸಮಯದಲ್ಲಿ ಕೊಲೆ ನಡೆದಿರುವುದು ಖಚಿತವಾಗಿದ್ದು, ಮೃತದೇಹದಲ್ಲಿ ಏಳು ಕಡೆ ಹರಿತವಾದ ಆಯುಧದಿಂದ ಇರಿದ ಗಾಯದ ಕಲೆಗಳಿರುವುದು ಪತ್ತೆಯಾಗಿತ್ತು. ಈ ಬೆನ್ನಲ್ಲೇ ಆಂಧ್ರ ಸರ್ಕಾರ ಹತ್ಯೆ ಪ್ರಕರಣವನ್ನು ಎಸ್ಐಟಿ ತನಿಖೆಗೆ ಒಪ್ಪಿಸಿತ್ತು. 


ಆದರೆ, ಜಗನ್ ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಒತ್ತಾಯಿಸಿದ್ದಾರೆ. ಟಿಡಿಪಿ ನೇತೃತ್ವದ ಸರ್ಕಾರದ ಪ್ರಭಾವ ರಾಜ್ಯ ಪೋಲೀಸರ ಮೇಲೆ ಬೀರುವ ಸಾಧ್ಯತೆ ಇರುವುದರಿಂದ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ. ಅಲ್ಲದೆ, "ನನ್ನ ಚಿಕ್ಕಪ್ಪನ ಕೊಲೆಗೆ ಹಿಂದೆ ಚಂದ್ರಬಾಬು ನಾಯ್ಡು ಅವರ ಕೈವಾಡವಿದೆ. ಈ ಹಿಂದೆ ನಮ್ಮ ತಾತ ವೈ.ಎಸ್.ರಾಜ ರೆಡ್ಡಿ ಅವರ ಕೊಲೆಯಾದಾಗಲೂ ಟಿಡಿಪಿ ಸರ್ಕಾರವೇ ಅಸ್ತಿತ್ವದಲ್ಲಿತ್ತು. ವೈಜಾಗ್ ಏರ್ಪೋರ್ಟ್ ನಲ್ಲಿ ನನ್ನ ಮೇಲೆ ಹತ್ಯೆ ಯತ್ನ ನಡೆದಾಗಲೂ ಟಿಡಿಪಿ ಸರ್ಕಾರವೇ ಅಸ್ತಿತ್ವದಲ್ಲಿತ್ತು. ಈಗಲೂ ಅದೇ ಸರ್ಕಾರ ಇದೆ" ಎಂದು ಜಗನ್ ಆರೋಪಿಸಿದ್ದಾರೆ.