ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಸಂಪುಟ ವಿಸ್ತರಣೆ ಮಾಡಿದ್ದು, ತಮ್ಮ ಪುತ್ರ ಕೆ.ಟಿ. ರಾಮರಾವ್ ಮತ್ತು ಸೋದರಳಿಯ ಟಿ. ಹರೀಶ್ ರಾವ್ ಸೇರಿದಂತೆ ಆರು ಮಂದಿ ಹೊಸ ಮಂತ್ರಿಗಳನ್ನು ತಮ್ಮ ಸಂಪುಟಕ್ಕೆ ಸೇರಿಸಿಕೊಂಡಿದ್ದಾರೆ. ರಾಜ್ ಭವನದಲ್ಲಿ ನಡೆದ ಸಮಾರಂಭದಲ್ಲಿ ತೆಲಂಗಾಣ ರಾಜ್ಯಪಾಲ ತಮಿಳುಸಾಯಿ ಸೌಂದರರಾಜನ್ ಹೊಸ ಮಂತ್ರಿಗಳಿಗೆ ಪ್ರಮಾಣ ವಚನ ಬೋಧಿಸಿದರು.


COMMERCIAL BREAK
SCROLL TO CONTINUE READING

ಕೆ.ಸಿ.ಆರ್ ಅವರ ಸಂಪುಟದಲ್ಲಿ ಸೇರ್ಪಡೆಗೊಂಡಿರುವ ಇತರ ನಾಲ್ವರು ಸಚಿವರು ಪಿ. ಸಬಿತಾ ಇಂದ್ರ ರೆಡ್ಡಿ, ಗಂಗುಲ ಕಮಲಕರ್, ಪುವವಾಡ ಅಜಯ್ ಮತ್ತು ಸತ್ಯವತಿ ರಾಥೋಡ್. ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಸಿಎಂ ಚಂದ್ರಶೇಖರ್ ರಾವ್, ಅವರ ಸಚಿವರು, ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ಎಸ್) ಮುಖಂಡರು, ಸಂಸದರು, ರಾಜ್ಯ ಶಾಸಕರು ಮತ್ತು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.


ತೆಲಂಗಾಣ ರಾಜ್ಯಪಾಲರಾಗಿ ಪ್ರಮಾಣ ವಚನ ಸ್ವೀಕರಿಸಿದ ಕೆಲವೇ ಗಂಟೆಗಳ ನಂತರ ರಾಜ್ಯಪಾಲ ಸೌಂದರರಾಜನ್ ನೂತನ ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು ಎಂಬುದು ಗಮನಾರ್ಹವಾದ ಅಂಶವಾಗಿದೆ. ಕುತೂಹಲಕಾರಿ ಸಂಗತಿಯೆಂದರೆ, ಮೊದಲ ಅವಧಿಯಲ್ಲಿ ಯಾವುದೇ ಮಹಿಳೆಗೂ ಸಂಪುಟದಲ್ಲಿ ಸ್ಥಾನ ನೀಡದ ಕೆಸಿಆರ್, ಪ್ರತಿಪಕ್ಷಗಳ ಟೀಕೆಗೆ ಗುರಿಯಾಗಿದ್ದರು. ಸಿಎಂ ಕೆಸಿಆರ್, ತಮ್ಮ ಹೊಸ ಸಂಪುಟದಲ್ಲಿ ಸಬಿತಾ ಇಂದ್ರ ರೆಡ್ಡಿ ಮತ್ತು ಸತ್ಯವತಿ ರಾಥೋಡ್ ಎಂಬ ಇಬ್ಬರು ಮಹಿಳೆಯರನ್ನು ಸೇರಿಸಿಕೊಂಡಿದ್ದಾರೆ. ಕೆ.ಟಿ. ರಾಮರಾವ್ ಮತ್ತು ಹರೀಶ್ ರಾವ್ ಸೇರಿದಂತೆ ಹೊಸದಾಗಿ ಸೇರ್ಪಡೆಗೊಂಡ ಮೂವರು ಸಚಿವರು ಈ ಹಿಂದೆ ಸಚಿವರಾಗಿ ಸೇವೆ ಸಲ್ಲಿಸಿದ್ದರು.


ಸಬಿತಾ ಒಂದು ಕಾಲದಲ್ಲಿ ಕಾಂಗ್ರೆಸ್ ಶಾಸಕರಾಗಿದ್ದರು. ಈ ಹಿಂದೆ ಅವಿಭಜಿತ ಆಂಧ್ರಪ್ರದೇಶದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಆದರೆ ಕೆಸಿಆರ್ ವಿಧಾನಸಭಾ ಚುನಾವಣೆಯಲ್ಲಿ ಜಯಗಳಿಸಿದ ನಂತರ ಅವರು ಕಾಂಗ್ರೆಸ್ ತೊರೆದು ಟಿಆರ್ಎಸ್ ಸೇರಿದರು.  ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲಿಸಿದ ನಂತರ ಟಿಆರ್ಎಸ್ ಅಧಿಕಾರಕ್ಕೆ ಮರಳಿದ ನಂತರ ಇದು ಕೆಸಿಆರ್ ಸಂಪುಟದ ಎರಡನೇ ವಿಸ್ತರಣೆಯಾಗಿದೆ.


ಆರು ಹೊಸ ಮಂತ್ರಿಗಳ ಸೇರ್ಪಡೆಯೊಂದಿಗೆ ತೆಲಂಗಾಣ ಕ್ಯಾಬಿನೆಟ್ ಸಚಿವರ ಸಂಖ್ಯೆ 18 ಕ್ಕೆ ಏರಿದೆ. 2018ರ ಡಿಸೆಂಬರ್ 13 ರಂದು ಚಂದ್ರಶೇಖರ್ ರಾವ್ ಎರಡನೇ ಅವಧಿಗೆ ತೆಲಂಗಾಣ ಮುಖ್ಯಮಂತ್ರಿಯಾಗಿ ಆಗಿ ಪ್ರಮಾಣ ವಚನ ಸ್ವೀಕರಿಸಿದರು.