ಸೂರತ್‌: ಗುಜರಾತ್‌ನ ಸೂರತ್‌ ನಲ್ಲಿರುವ ತಕ್ಷಶಿಲಾ ಆರ್ಕೇಡ್‌ನ‌ ಕೋಚಿಂಗ್ ಸೆಂಟರ್ ನಲ್ಲಿ ಶುಕ್ರವಾರ ಸಂಜೆ ಅಗ್ನಿ ಅವಘಡ ಸಂಭವಿಸಿದ್ದು, 20 ವಿದ್ಯಾರ್ಥಿಗಳು ದಾರುಣವಾಗಿ ಸಾವನ್ನಪ್ಪಿದ್ದಾರೆ.


COMMERCIAL BREAK
SCROLL TO CONTINUE READING

ನಾಲ್ಕು ಅಂತಸ್ತಿನ ವಾಣಿಜ್ಯ ಕಟ್ಟಡದಲ್ಲಿ ಮೊದಲಿಗೆ ದಟ್ಟವಾದ ಹೋಗೆ ಕಾಣಿಸಿಕೊಂಡು ನಂತರ ಬೆಂಕಿ ಹತ್ತಿಕೊಂಡಿದೆ. ಈ ಕಟ್ಟಡದಲ್ಲಿಯೇ ಅಕ್ರಮವಾಗಿ ಕೋಚಿಂಗ್ ಸೆಂಟರ್ ನಡೆಸಲಾಗುತ್ತಿದ್ದು, 70 ವಿದ್ಯಾರ್ಥಿಗಳು ತರಗತಿಯಲ್ಲಿದ್ದರು ಎನ್ನಲಾಗಿದ್ದು, ಈ ಘಟನೆಯಲ್ಲಿ ಮೃತರಾದವರಲ್ಲಿ ಹೆಚ್ಚಿನ ವಿದ್ಯಾರ್ಥಿಗಳು 14-17 ವರ್ಷ ವಯಸ್ಸಿನವರಾಗಿದ್ದಾರೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಅನಾಹುತ ಸಂಭವಿಸಿದ್ದು, 16 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ. 



ಕಟ್ಟಡದಿಂದ ಹೊರಬರಲು ಇದ್ದ ಒಂದೇ ಮಾರ್ಗವೆಂದರೆ ಅದು ಮರದ ಮೆಟ್ಟಿಲುಗಳು. ಆದರೆ ಬೆಂಕಿ ಅನಾಹುತದಲ್ಲಿ ಅವು ಹತ್ತಿ ಉರಿದ ಪರಿಣಾಮ, ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ವಿದ್ಯಾರ್ಥಿಗಳು ಜೀವ ಉಳಿಸಿಕೊಳ್ಳಲು ಬೇರೆ ಯಾವುದೇ ದಾರಿ ಕಾಣದೇ ಕಟ್ಟಡದಿಂದಲೇ ಹಾರಿದ್ದಾರೆ. ಈ ರೀತಿ ಹಾರಿದ ಆರು ವಿದ್ಯಾರ್ಥಿಗಳನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. 19 ಕ್ಕೂ ಹೆಚ್ಚು ಅಗ್ನಿ ಶಾಮಕ ವಾಹನಗಳು ಕಾರ್ಯಾಚರಣೆ ಆರಂಭಿಸಿದೆ. ಕ್ರೇನ್‌ಗಳನ್ನೂ ಬಳಸಿಕೊಂಡು ಜನರನ್ನು ಕಟ್ಟಡದಿಂದ ಇಳಿಸಲಾಗಿದೆ.


ಈಗಾಗಲೇ ಸೂರತ್ ಪೊಲೀಸರು ಮೂವರು ಬಿಲ್ಡರ್ ಗಳಾದ ಹರ್ಷಲ್ ವೆಕರಿಯಾ, ಗಿಜ್ಞೇಶ್ ಮತ್ತು ಕೋಚಿಂಗ್ ಸೆಂಟರ್ ಮಾಲೀಕ ಭಾರ್ಗವ್ ಭೂತಾನಿ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. 



ಗಣ್ಯರಿಂದ ಸಂತಾಪ
ಗುಜರಾತ್ ನಲ್ಲಿ ನಡೆದ ಈ ದುರ್ಘಟನೆಗೆ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ, ಗುಜರಾತ್‌ ಸಿಎಂ ವಿಜಯ್‌ ರೂಪಾನಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಅಗ್ನಿ ಅವಘಡದಲ್ಲಿ ಸಿಲುಕಿದ ಜನರನ್ನು ರಕ್ಷಿಸಲು ನಾಗರಿಕರೂ ಧಾವಿಸಿದ್ದು, ಬಿಜೆಪಿ ಕಾರ್ಯಕರ್ತರೂ ನೆರವು ನೀಡಿ ಎಂದು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಸೂಚಿಸಿದ್ದಾರೆ.


ನಾಲ್ಕು ಲಕ್ಷ ರೂ. ಪರಿಹಾರ
ಅಲ್ಲದೆ, ಘಟನೆಯ ಸಮಗ್ರ ತನಿಖೆಗೆ ಗುಜರಾತ್‌ ಸಿಎಂ ವಿಜಯ್‌ ರೂಪಾಣಿ ಆದೇಶಿಸಿದ್ದು, ಈ ಬೆನ್ನಲ್ಲೇ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಅಗ್ನಿನಿವಾರಕ ಸಿಲಿಂಡರ್ ಗಳನ್ನು ಅಳವಡಿಸಲು ಸೂಚಿಸಿದ್ದಾರೆ. ಅಲ್ಲದೆ ಮೃತರ ಕುಟುಂಬಕ್ಕೆ 4 ಲಕ್ಷ ರೂ. ಪರಿಹಾರವನ್ನೂ ನೀಡುವುದಾಗಿ ರೂಪಾಣಿ ಘೋಷಿಸಿದ್ದಾರೆ.