ವರುಣನ ಅಬ್ಬರಕ್ಕೆ ಕೇರಳ ತತ್ತರ; ಆಗಸ್ಟ್ 11 ರವರೆಗೆ ಕಾರ್ಯಾಚರಣೆ ಸ್ಥಗಿತಗೊಳಿಸಿದ ಕೊಚ್ಚಿನ್ ವಿಮಾನ ನಿಲ್ದಾಣ
ಕೇರಳದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಆಗಸ್ಟ್ 11 ರವರೆಗೆ ಕೇರಳದ ಕೊಚ್ಚಿನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ.
ತಿರುವನಂತಪುರ: ಕೇರಳದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆ ತೀವ್ರ ಜಲಾವೃತ ಮತ್ತು ಪ್ರವಾಹದಂತಹ ಪರಿಸ್ಥಿತಿಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಆಗಸ್ಟ್ 11 ರವರೆಗೆ ಕೇರಳದ ಕೊಚ್ಚಿನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದ್ದು, ಶಾಲಾ-ಕಾಲೇಜುಗಳಿಗೂ ರಜೆ ಘೋಷಿಸಲಾಗಿದೆ.
ಕಳೆದ ಹಲವಾರು ದಿನಗಳಿಂದ ಕೇರಳವು ಎರಡನೇ ಸುತ್ತಿನ ನೈರುತ್ಯ ಮಾನ್ಸೂನ್‌ಗೆ ಸಾಕ್ಷಿಯಾಗಿದೆ. ಆಗಸ್ಟ್ 9 ರಂದು ರಾಜ್ಯದಲ್ಲಿ ಇಡುಕ್ಕಿ, ವಯನಾಡ್, ಮಲಪ್ಪುರಂ ಮತ್ತು ಕೋಜಿಕೋಡ್ ಎಂಬ ನಾಲ್ಕು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಹೊರಡಿಸಲಾಗಿದೆ. ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ ಮತ್ತು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ನಿರ್ದೇಶಿಸುತ್ತದೆ.
ಈಗಾಗಲೇ 22,165 ಜನರನ್ನು ಸುರಕ್ಷತೆಗಾಗಿ ಸ್ಥಳಾಂತರಿಸಲಾಗಿದೆ ಮತ್ತು ರಾಜ್ಯಾದ್ಯಂತ 315 ಪರಿಹಾರ ಮತ್ತು ರಕ್ಷಣಾ ಶಿಬಿರಗಳಲ್ಲಿ ತೆರೆಯಲಾಗಿದೆ. ವಯನಾಡ್ ಜಿಲ್ಲೆ ಒಂದರಲ್ಲೇ ಒಟ್ಟು 105 ಶಿಬಿರಗಳನ್ನು ಸ್ಥಾಪಿಸಲಾಗಿದೆ.
ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಭೂಕುಸಿತ ಉಂಟಾಗುತ್ತಿರುವುದರಿಂದ ಜನರು ಹೆಚ್ಚು ಸುರಕ್ಷಿತ ಸ್ಥಳಕ್ಕೆ ತಲುಪಲು ಪ್ರಯತ್ನಿಸುತ್ತಿದ್ದಾರೆ. ವಯನಾಡಿನ ಪುತ್ತುಮಾಲಾದಲ್ಲಿ ಗುರುವಾರ ಭೂಕುಸಿತ ಸಂಭವಿಸಿದೆ. ಈ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಯಿತು.