ನೋಯ್ಡಾ: ಪುಲ್ವಾಮಾದಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ಫೇಸ್ ಬುಕ್ ನಲ್ಲಿ ವಿವಾದಾತ್ಮಕ ಪೋಸ್ಟ್ ಮಾಡಿದ ಗ್ರೇಟರ್ ನೋಯ್ಡಾದ ಕಾಲೇಜೊಂದರ ವಿದ್ಯಾರ್ಥಿಯನ್ನು ಆಡಳಿತ ಮಂಡಳಿ ಕಾಲೇಜಿನಿಂದಲೇ ಅಮಾನತು ಮಾಡಿ ಆದೇಶ ಹೊರಡಿಸಿದೆ. 


COMMERCIAL BREAK
SCROLL TO CONTINUE READING

ಆದರೆ ಈ ಆರೋಪವನ್ನು ಐಐಎಂಟಿ ಇಂಜಿನಿಯರಿಂಗ್ ಕಾಲೇಜಿನ ಎಂಬಿಎ ಅಂತಿಮ ವರ್ಷದ ವಿದ್ಯಾರ್ಥಿ ಇಷ್ಪಾಕ್ ಅಹಮದ್ ಖ್ವಾಜಾ ತಳ್ಳಿಹಾಕಿದ್ದು, ತನ್ನ ಫೋಟೋ ಇರುವ ನಕಲಿ ಫ್ರೋಫೈಲ್ನಿಂದ ಶುಕ್ರವಾರ ವಿವಾದಾತ್ಮಕ ಪೋಸ್ಟ್ ಮಾಡಲಾಗಿದೆ. ಅದು ತಾನು ಮಾಡಿದ್ದಲ್ಲ ಎಂದಿದ್ದಾನೆ.


ಈ ಬಗ್ಗೆ ಮಾಹಿತಿ ನೀಡಿರುವ  ಕಾಲೇಜು ಅಧಿಕಾರಿ ಸಂಜಯ್ ಪಚೌರೀ ಅವರು, ವಿವಾದಾತ್ಮಕ ಫೇಸ್ ಬುಕ್ ಪೋಸ್ಟ್ ಬಗ್ಗೆ ತನ್ನ ಸ್ಥಳೀಯ ಪೋಲಿಸ್ ಠಾಣೆಯಲ್ಲಿ ದೂರು ನೀಡುವಂತೆ ವಿದ್ಯಾರ್ಥಿ ಇಷ್ಪಾಕ್ ಗೆ ತಿಳಿಸಲಾಗಿತ್ತು. ಆದರೆ ಆತ ಈ ಬಗ್ಗೆ ಯಾವುದೇ ದೂರು ನೀಡಿಲ್ಲ ಎಂದು ತಿಳಿಸಿದ್ದಾರೆ.



ಫೇಸ್ಬುಕ್ ಖಾತೆಯನ್ನು ಹ್ಯಾಕ್ ಮಾಡಿ ದೇಶ ವಿರೋಧಿ ಹೇಳಿಕೆಗಳನ್ನು ಪೋಸ್ಟ್ ಮಾಡಲಾಗಿದೆ ಎಂದು ಫೆಬ್ರವರಿ 16, 2019 ರಂದು ವಿದ್ಯಾರ್ಥಿ ಹೇಳಿಕೆ ನೀಡಿದ್ದ. ಈ ಬಗ್ಗೆ ಸಂಬಂಧಿತ ಪೋಲಿಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸುವಂತೆ ತಿಳಿಸಿ, ಅದರ ಪ್ರತಿಯನ್ನು ಕಾಲೇಜಿಗೆ ಸಲ್ಲಿಸುವಂತೆ ತಿಳಿಸಲಾಗಿತ್ತು. ಆದರೆ, ದೂರು ನೀಡಿ ಎಫ್ಐಆರ್ ಪ್ರತಿ ಸಲ್ಲಿಸುವಲ್ಲಿ ವಿಫಲನಾದ ಕಾರಣ ಆತನನ್ನು ಕಾಲೇಜಿನಿಂದ ಅಮಾನತು ಮಾಡಲಾಗಿದೆ ಎಂದು ಕಾಲೇಜು ಆಡಳಿತ ಮಂಡಳಿ ಆದೇಶದಲ್ಲಿ ತಿಳಿಸಿದೆ.


ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಕಳೆದ ಗುರುವಾರ ನಡೆದ ಭಯೋತ್ಪಾದಕ ದಾಳಿಯಲ್ಲಿ 44 ಯೋಧರು ಹುತಾತಮ್ರಾಗಿದ್ದರು. ಇವರಲ್ಲಿ 40 ಯೋಧರನ್ನು ಅವರ ಆಧಾರ್ ಕಾರ್ಡ್ ಹಾಗೂ ಇತರ ಗುರುತಿನ ಪತ್ರಗಳ ಆಧಾರದ ಮೇಲೆ ಗುರುತಿಸಿ ಪಾರ್ಥಿವ ಶರೀರಗಳನ್ನು ಅವರವರ ಕುಟುಂಬಗಳಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ಅಷ್ಟೇ ಅಲ್ಲದೆ, ಮೃತ ಯೋಧರ ಕುಟುಂಬಗಳಿಗೆ ಉದ್ಯೋಗ ಮತ್ತು ಆರ್ಥಿಕ ನೆರವು ನೀಡುವುದಾಗಿಯೂ ಕೇಂದ್ರ ಸರ್ಕಾರ ಘೋಷಿಸಿದೆ.