ನವದೆಹಲಿ: ಅಕ್ಟೋಬರ್ 21 ರಂದು ಪಂಜಾಬ್‌ನಲ್ಲಿ ನಡೆಯಲಿರುವ ವಿಧಾನಸಭೆ ಉಪಚುನಾವಣೆಗೆ ಕಾಂಗ್ರೆಸ್ ನಾಲ್ಕು ಅಭ್ಯರ್ಥಿಗಳ ಹೆಸರನ್ನು ಸೋಮವಾರ ಪ್ರಕಟಿಸಿದೆ. 


COMMERCIAL BREAK
SCROLL TO CONTINUE READING

ಫಾಗ್ವಾರಾ ಕ್ಷೇತ್ರದ ಅಭ್ಯರ್ಥಿಯಾಗಿ ಬಲ್ವಿಂದರ್ ಧಲಿವಾಲ್, ಮುಕೇರಿಯನ್ ಕ್ಷೇತ್ರದ ಅಭ್ಯರ್ಥಿಯಾಗಿ ಇಂದೂ ಬಾಲ್, ದಾಖಾ ಕ್ಷೇತ್ರದಲ್ಲಿ ಸಂದೀಪ್ ಸಂಧು, ಜಲಾಲಾಬಾದ್ ಕ್ಷೇತ್ರದ ಅಭ್ಯರ್ಥಿಯಾಗಿ ರಮಿಂದರ್ ಆಮ್ಲಾ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ನಿರ್ಧರಿಸಿದೆ.



2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿ ಸೋಮ್ ಪ್ರಕಾಶ್ ಜಯಗಳಿಸಿದ ಬಳಿಕ ಫಾಗ್ವಾರ ಸ್ಥಾನ ತೆರವಾಗಿದೆ. ಎಎಪಿ ಮಾಜಿ ಶಾಸಕ ಎಚ್.ಎಸ್. ಫೂಲ್ಕಾ ಈ ವರ್ಷದ ಜನವರಿಯಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ದಖಾ ಕ್ಷೇತ್ರದಲ್ಲಿ ಸ್ಥಾನ ತೆರವಾಗಿದೆ. ಕಾಂಗ್ರೆಸ್ ಶಾಸಕ ರಜನೀಶ್ ಕುಮಾರ್ ಬಾಬ್ಬಿ ನಿಧನದಿಂದಾಗಿ ಮುಕೇರಿಯನ್ ಸ್ಥಾನ ತೆರವಾಗಿದೆ. ಜಲಾಲಾಬಾದ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಎಸ್‌ಎಡಿ ಅಧ್ಯಕ್ಷ ಸುಖ್ಬೀರ್ ಸಿಂಗ್ ಬಾದಲ್ ಅವರು ಲೋಕಸಭೆಗೆ ಆಯ್ಕೆಯಾದ ಕಾರ ಆ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದೆ. 


ಅರುಣಾಚಲ ಪ್ರದೇಶ, ಬಿಹಾರ, ಛತ್ತೀಸ್‌ಗಢ, ಅಸ್ಸಾಂ, ಗುಜರಾತ್, ಹಿಮಾಚಲ ಪ್ರದೇಶ, ಕರ್ನಾಟಕ, ಕೇರಳ, ಮಧ್ಯಪ್ರದೇಶ, ಮೇಘಾಲಯ, ಒಡಿಶಾ, ಪುದುಚೇರಿ, ಪಂಜಾಬ್, ರಾಜಸ್ಥಾನ ರಾಜ್ಯಗಳ ಒಟ್ಟು 64 ಕ್ಷೇತ್ರಗಳಿಗೆ ಅಕ್ಟೋಬರ್ 21ರಂದು ಉಪಚುನಾವಣೆ ನಡೆಯಲಿದ್ದು, ಅಕ್ಟೋಬರ್ 24 ರಂದು ಫಲಿತಾಂಶ ಹೊರಬೀಳಲಿದೆ.