ಕಾಂಗ್ರೆಸ್ಗೆ ಮುಸ್ಲಿಂ ಲೀಗ್ ವೈರಸ್ ತಗುಲಿದೆ, ಅಧಿಕಾರಕ್ಕೆ ಬಂದರೆ ದೇಶ ನಾಶ: ಯೋಗಿ ಆದಿತ್ಯನಾಥ್
ದೇಶದ ವಿಭಜನೆಗೆ ಕಾರಣವಾದ ಅದೇ ಮುಸ್ಲಿಂ ಲೀಗ್ನೊಂದಿಗೆ ಕಾಂಗ್ರೆಸ್ ಕೈ ಜೋಡಿಸಿದೆ ಎಂದು ಯೋಗಿ ಆದಿತ್ಯನಾಥ್ ವಾಗ್ದಾಳಿ ನಡೆಸಿದ್ದಾರೆ.
ನವದೆಹಲಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಾಹುಲ್ ಗಾಂಧಿ ಕೇರಳದ ವಯನಾಡಿನಿಂದ ಸ್ಪರ್ಧಿಸುತ್ತಿರುವುದನ್ನು ತೀವ್ರವಾಗಿ ಟೀಕಿಸಿದ್ದಾರೆ.
ಕೇರಳದ ಮುಸ್ಲಿಂ ಲೀಗ್ನ ಮೈತ್ರಿಯೊಂದಿಗೆ ಚುನಾವಣೆಯಲ್ಲಿ ಗೆಲ್ಲಲು ರಾಹುಲ್ ಗಾಂಧಿ ಬಯಸುತ್ತಿದ್ದಾರೆ. ದೇಶದ ವಿಭಜನೆಗೆ ಕಾರಣವಾದ ಅದೇ ಮುಸ್ಲಿಂ ಲೀಗ್ನೊಂದಿಗೆ ಕಾಂಗ್ರೆಸ್ ಕೈ ಜೋಡಿಸಿದೆ ಎಂದು ಯೋಗಿ ಆದಿತ್ಯನಾಥ್ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಕಾಂಗ್ರೆಸ್ ಮುಸ್ಲಿಂ ಲೀಗ್ ಎಂಬ ಸೋಂಕಿನೊಂದಿಗೆ ಮೈತ್ರಿಯಾಗಿದೆ. ಈ ವೈರಸ್ ತಗುಲಿದವರು ಯಾರೂ ಉಳಿಯುವುದಿಲ್ಲ. ಈಗಾಗಲೇ ವಿರೋಧ ಪಕ್ಷ ಕಾಂಗ್ರೆಸ್ ಈ ಸೋಂಕಿಗೆ ಒಳಗಾಗಿದ್ದು, ಚುನಾವಣೆಯಲ್ಲಿ ಗೆದ್ದರೆ ಏನಾಗಬಹುದು ನೀವೇ ಯೋಚಿಸಿ... ಈ ವೈರಸ್ ದೇಶಾದ್ಯಂತ ಹರಡುತ್ತದೆ" ಎಂದಿದ್ದಾರೆ.
"1857 ರ ಸ್ವಾತಂತ್ರ್ಯ ಹೋರಾಟದಲ್ಲಿ ಇಡೀ ರಾಷ್ಟ್ರವು ಬ್ರಿಟೀಷರ ವಿರುದ್ಧ ಮಂಗಲ್ ಪಾಂಡೆಯೊಂದಿಗೆ ಹೋರಾಡಿತ್ತು. ನಂತರ ಈ ಮುಸ್ಲಿಂ ಲೀಗ್ ವೈರಸ್ ಬಂದು ಇಡೀ ದೇಶವನ್ನೇ ಹರಡಿ ವಿಭಜಿಸಿತು. ಇಂದು ಅದೇ ಸ್ಥಿತಿ ಎದುರಾಗುವ ಆತಂಕ ಸೃಷ್ಟಿಯಾಗಿದೆ. ಹಸಿರು ಧ್ವಜಗಳು ಮತ್ತೆ ಹಾರಾಡುತ್ತಿವೆ. ಕಾಂಗ್ರೆಸ್ ಮುಸ್ಲಿಂ ಲೀಗ್ ವೈರಸ್ ನಿಂದ ಸೊಂಕಿತವಾಗಿದೆ. ಎಚ್ಚರವಾಗಿರಿ" ಎಂದು ಯೋಗಿ ಹೇಳಿದ್ದಾರೆ.