ಪಿಡಬ್ಲ್ಯುಡಿ ಎಂಜಿನಿಯರ್ ಮೇಲೆ ಕೊಳಚೆ ನೀರೆರೆಚಿದ ಕಾಂಗ್ರೆಸ್ ಶಾಸಕ!
ಈ ದಿನಗಳಲ್ಲಿ ರಸ್ತೆ ಗುಂಡಿಗಳಿಗೆ ಅನೇಕ ಜನರು ಬಲಿಯಾಗಿದ್ದಾರೆ ಎಂದು ಜನರು ದೂರಿದ್ದಾರೆ.
ಪಣಜಿ: ಕೆಲವು ದಿನಗಳ ಹಿಂದೆ ಮಧ್ಯಪ್ರದೇಶದಲ್ಲಿ ಬಿಜೆಪಿಯ ಹಿರಿಯ ಮುಖಂಡ ಕೈಲಾಶ್ ವಿಜಯವರ್ಗಿಯ ಅವರ ಪುತ್ರ ಮತ್ತು ಬಿಜೆಪಿ ಶಾಸಕ ಆಕಾಶ್ ವಿಜಯವರ್ಗಿಯವರು ಪುರಸಭೆ ಅಧಿಕಾರಿ ಮೇಲೆ ಹಲ್ಲೆ ನಡೆಸಿದ್ದರು. ಇದೀಗ ಇದೇ ರೀತಿಯ ಪ್ರಕರಣವೊಂದು ಮಹಾರಾಷ್ಟ್ರದಿಂದ ಹೊರಬಂದಿದೆ. ಈಗ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ನಾರಾಯಣ್ ರಾಣೆ ಪುತ್ರ ಮತ್ತು ಕಾಂಗ್ರೆಸ್ ಶಾಸಕ ನಿತೇಶ್ ರಾಣೆ ಮತ್ತು ಅವರ ಬೆಂಬಲಿಗರು ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ) ಎಂಜಿನಿಯರ್ ಮೇಲೆ ಕೊಳಚೆ ನೀರೆರೆಚಿ ಹಗ್ಗದಿಂದ ಕಟ್ಟಿಹಾಕಿದ ಘಟನೆ ನಡೆದಿದೆ.
ಸಿಂಧುದುರ್ಗ್-ಗೋವಾ ಹೆದ್ದಾರಿಯಲ್ಲಿ ಮಹಾರಾಷ್ಟ್ರದ ಕಂಕವ್ಲಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಶಾಸಕರಾಗಿರುವ ನಿತೇಶ್ ರಾಣೆ ಅವರಿಗೆ ದೂರು ಸಲ್ಲಿಸಿರುವ ಕ್ಷೇತ್ರದ ಜನತೆ, ಹೆದ್ದಾರಿಗಳಲ್ಲಿ ಗುಂಡಿಗಳು ಹೆಚ್ಚಾಗಿರುವುದರಿಂದ ಮಳೆಯಿಂದಾಗಿ ನೀರು ತುಂಬಿ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಅಷ್ಟೇ ಅಲ್ಲದೆ ರಸ್ತೆಯಲ್ಲಿನ ಗುಂಡಿಗಳಿಂದಾಗಿ ಹಲವರು ಅಪಘಾತಕ್ಕೆ ಬಲಿಯಾಗುತ್ತಿದ್ದಾರೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಗಾರ್ಂಡಿ ಸೇತುವೆಯಿಂದ ಸಂಪೂರ್ಣ ಮಾರ್ಗದಲ್ಲಿ ದೊಡ್ಡ ದೊಡ್ಡ ಹಳ್ಳಗಳಿರುವ ಬಗ್ಗೆ ಹಾಗೂ ಅಪಘಾತಗಳ ಬಗ್ಗೆ ಸ್ಥಳೀಯ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
ಜನರ ದೂರಿನ ಮೇರೆಗೆ ಸ್ಥಳೀಯ ಶಾಸಕ ನಿತೇಶ್ ರಾಣೆ ತಮ್ಮ ಕಾರ್ಯಕರ್ತರೊಂದಿಗೆ ತೆರಳಿ ಸ್ಥಳ ಪರಿಶೀಲನೆ ನಡೆಸಿದರು. ಬಳಿಕ ಪಿಡಬ್ಲ್ಯೂಡಿ ಎಂಜಿನಿಯರ್ ಪ್ರಕಾಶ್ ಖೇಡೇಕರ್ ಅವರನ್ನು ಕೂಡ ಸ್ಥಳಕ್ಕೆ ಆಗಮಿಸುವಂತೆ ಕರೆದಿದ್ದರು. ಈ ಸಮಯದಲ್ಲಿ, ರಸ್ತೆ ಗುಂಡಿ ಮತ್ತು ಕೆಸರಿನಿಂದ ಜನರು ಎದುರಿಸುತ್ತಿರುವ ಸಮಸ್ಯೆಗೆ ಸ್ಪಂದಿಸುವಂತೆ ಎಂಜಿನಿಯರ್‌ರನ್ನು ಒತ್ತಾಯಿಸಲಾಯಿತು. ಅದೇ ಸಮಯದಲ್ಲಿ, ಶಾಸಕರ ಬೆಂಬಲಿಗರು ಎಂಜಿನಿಯರ್ ಅನ್ನು ಬಂಧಿಸಲು ಪ್ರಯತ್ನಿಸಿದರು.
ಶಾಸಕ ನಿತೇಶ್ ರಾಣೆ ಮಾತನಾಡಿ, “ಇದು ಗೋವಾವನ್ನು ಸಂಪರ್ಕಿಸುವ ಪ್ರಮುಖ ಹೆದ್ದಾರಿ. ಇಲ್ಲಿ ಇಪ್ಪತ್ನಾಲ್ಕು ಗಂಟೆಗಳು ಸಂಚಾರವಿರುತ್ತದೆ. ಈ ರಸ್ತೆಯಲ್ಲಿ ಗುಂಡಿಗಳು ಹೆಚ್ಚಾಗಿರುವುದರಿಂದ ಮಳೆ ಬಂದಾಗ ನೀರು ತುಂಬಿ ರಸ್ತೆಯಲ್ಲಿರುವ ಗುಂಡಿಗಳಲ್ಲಿ ಮಣ್ಣಿನ ನೀರು ಶೇಖರಣೆಯಾಗುತ್ತದೆ. ಮಳೆ ನೀರು ತುಂಬುವುದರಿಂದ ವಾಹನಗಳಲ್ಲಿ ಮಣ್ಣು ಹರಿಯುತ್ತದೆ. ಇದನ್ನು ಯಾರು ಸರಿಪಡಿಸಬೇಕೆಂಬುದನ್ನು ಜವಾಬ್ದಾರಿ ಹುದ್ದೆಯಲ್ಲಿರುವವರು ಅರಿತುಕೊಳ್ಳಬೇಕು ಎಂದಿದ್ದಾರೆ.
ಶಾಸಕ ನಿತೇಶ್ ರಾಣೆ ಎಂಜಿನಿಯರ್ ಖೇಡೇಕರ್ ಅವರಿಗೆ ಪರಿಸ್ಥಿತಿಯ ಬಗ್ಗೆ ಅರಿವು ಮೂಡಿಸಿದರು. ಈ ವಲೇ ಮಾತಿನ ಚಕಮಕಿ ನಡೆದು ಶಾಸಕರು ಎಂಜಿನಿಯರ್ ಮೇಲೆ ಶಾಸಕರು ಕೊಳಚೆ ನಿರೇರೆಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಸ್ತೆ ಸರಿಪಡಿಸಲು ಶಾಸಕ ರಾಣೆ ಎಂಜಿನಿಯರ್ ಖೇಡೇಕರ್‌ಗೆ 15 ದಿನಗಳ ಕಾಲಾವಕಾಶ ನೀಡಿದ್ದು, 15 ದಿನಗಳಲ್ಲಿ ಅದು ಸರಿಯಾಗದಿದ್ದರೆ, ಮುಂದೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ.