`ಕಾಂಗ್ರೆಸ್ ಪಕ್ಷ ಈಸ್ಟ್ ಇಂಡಿಯಾ ಪಕ್ಷದಂತೆ ರಾಜ್ಯವನ್ನು ಲೂಟಿ ಮಾಡುತ್ತಿದೆ`
ವಿದೇಶ ಪ್ರವಾಸದಿಂದ ಹಿಂದಿರುಗಿದ ತಕ್ಷಣದಿಂದಲೇ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ವರ್ಗಾವಣೆ ದಂಧೆ, ಭ್ರಷ್ಟಾಚಾರ, ಕಮೀಷನ್ ಸಂಗ್ರಹದ ಬಗ್ಗೆ ಗುರುತರ ಆರೋಪಗಳನ್ನು ಮಾಡಿದ್ದಾರೆ.
ಬೆಂಗಳೂರು: ವಿದೇಶ ಪ್ರವಾಸದಿಂದ ಹಿಂದಿರುಗಿದ ತಕ್ಷಣದಿಂದಲೇ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ವರ್ಗಾವಣೆ ದಂಧೆ, ಭ್ರಷ್ಟಾಚಾರ, ಕಮೀಷನ್ ಸಂಗ್ರಹದ ಬಗ್ಗೆ ಗುರುತರ ಆರೋಪಗಳನ್ನು ಮಾಡಿದ್ದಾರೆ.
ಕಳೆದ ರಾತ್ರಿ ಅವರು ಯುರೋಪ್ ಪ್ರವಾಸ ಮುಗಿಸಿಕೊಂಡು ಬೆಂಗಳೂರಿಗೆ ವಾಪಸ್ ಬಂದರು.ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಮ್ಮನ್ನು ಭೇಟಿಯಾದ ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಅವರು ಉತ್ತರ ನೀಡಿದರು.
ಕಾಂಗ್ರೆಸ್ ಪಕ್ಷ ಈಸ್ಟ್ ಇಂಡಿಯಾ ಪಕ್ಷದಂತೆ ರಾಜ್ಯವನ್ನು ಲೂಟಿ ಮಾಡುತ್ತಿದೆ. ಪೊಲೀಸ್ ವರ್ಗಾವಣೆಯಲ್ಲಿ ವೈಎಸ್ ಟಿ ದಂಧೆಕೋರರು ಶಾಮೀಲಾಗಿದ್ದಾರೆ, ಬಿಡಿಎ ಅಧಿಕಾರಿಗಳಿಂದ 250 ಕೋಟಿ ರೂಪಾಯಿ ಡಿಮ್ಯಾಂಡ್ ಮಾಡಲಾಗಿದೆ ಎಂಬುದು ಮಾಜಿ ಮುಖ್ಯಮಂತ್ರಿ ಅವರು ಮಾಡಿರುವ ಗಂಭೀರ ಆರೋಪಗಳು.
ದುಡ್ಡಿದ್ದರೆ ಮನೆ ಒಳಕ್ಕೆ ಬನ್ನಿ ಎನ್ನುವ ಸಚಿವರ ಚೇಲಾಗಳು:
ರಾಜ್ಯದಲ್ಲಿ ಪರ್ಸೆಂಟೇಜ್ ಸಂಗ್ರಹ ಅವ್ಯಾಹತವಾಗಿ ನಡೆಯುತ್ತಿದೆ. ಸಚಿವರೊಬ್ಬರು ನೇರವಾಗಿ ಗುತ್ತಿಗೆದಾರರಿಂದ ಕಮೀಷನ್ ಡಿಮ್ಯಾಂಡ್ ಮಾಡುತ್ತಿದ್ದಾರೆ. ಇತ್ತೀಚೆಗೆ ಆ ಸಚಿವರನ್ನು ಭೇಟಿಯಾಗಲು ಹೋಗಿದ್ದ ಗುತ್ತಿಗೆದಾರರಿಗೆ, ಹಣ ತಂದಿದ್ದರೆ ಒಳಕ್ಕೆ ಬನ್ನಿ. ಇಲ್ಲವಾದರೆ ಹೊರಗೆ ಇರಿ ಎಂದು ಆ ಸಚಿವರ ಚೇಲಾಗಳು ತಾಕೀತು ಮಾಡಿದ್ದಾರೆ. ಇವರು ಹೋಗಿ ದೆಹಲಿಯಲ್ಲಿ ಭ್ರಷ್ಟಾಚಾರ ಕಡಿಮೆ ಮಾಡುತ್ತೇವೆ ಎಂದು ರಾಹುಲ್ ಗಾಂಧಿ ಅವರಿಗೆ ಹೇಳುತ್ತಾರೆ!! ಇಂಥವರಿಂದ ರಾಜ್ಯದ ಉದ್ಧಾರ ಸಾಧ್ಯವೇ? ಪಾರದರ್ಶಕ ಆಡಳಿತ ನೀಡಲು ಆಗುತ್ತದೆಯೇ? ಎಂದು ಅವರು ಪ್ರಶ್ನಿಸಿದರು.
250 ಕೋಟಿಗೆ ಡಿಮ್ಯಾಂಡ್:
ಬಿಡಿಎ ಅಧಿಕಾರಿಗಳಿಂದಲೂ ಹಣಕ್ಕೆ ಬೇಡಿಕೆ ಇಡಲಾಗಿದೆ. ದಿಲ್ಲಿಗೆ ಈ ಹಣ ಕಲಿಸಬೇಕು, ಕೊನೆಪಕ್ಷ 250 ಕೋಟಿ ರೂಪಾಯಿ ಕಲೆಕ್ಷನ್ ಆಗಬೇಕು ಎಂದು ಅಧಿಕಾರಿಗಳು ಒಬ್ಬರು ಮಹಾನುಭಾವರು ತಾಕೀತು ಮಾಡುತ್ತಾರೆ. ದುಡ್ಡು ಯಾರಿಗೆ ಸೇರಬೇಕು ಅವರ ಪಟ್ಟಿ ಕೊಡುತ್ತೇವೆ, ಅವರಿಗೆ ನೇರವಾಗಿ ದುಡ್ಡು ತಲುಪಿಸಿ ಎಂದು ಹೇಳುತ್ತಾರಂತೆ. ನಾನು ಯುರೋಪ್ ನಲ್ಲಿ ಇದ್ದಾಗಲೇ ಈ ಬಗ್ಗೆ ಮಾಹಿತಿ ಬಂತು ಎಂದು ಮಾಜಿ ಮುಖ್ಯಮಂತ್ರಿ ಅವರು ಚಾಟಿ ಬೀಸಿದರು.
ಕಾಂಗ್ರೆಸ್ ಪಕ್ಷವು ಕರ್ನಾಟಕವನ್ನು ಈಸ್ಟ್ ಇಂಡಿಯಾ ಕಂಪನಿಯಂತೆ ಲೂಟಿ ಮಾಡುತ್ತಿದೆ. ಜನರಿಗೆ ಗ್ಯಾರಂಟಿ ತುಪ್ಪ ಸವರಿ ವರ್ಗಾವಣೆ ದಂಧೆಯಲ್ಲಿ ಕೊಳ್ಳೆ ಹೊಡೆಯುತ್ತಿದೆ. ಬೆಂಗಳೂರನ್ನು ಸಿಂಗಾಪುರ ಮಾಡುತ್ತೇವೆ ಎಂದು ಹೇಳಿದವರು ಇವತ್ತು ಇದೇ ಬೆಂಗಳೂರನ್ನು ಕೊಳ್ಳೆ ಹೊಡೆಯುತ್ತಿದ್ದಾರೆ. ಹೊರನೋಟಕ್ಕೆ ಭ್ರಷ್ಟಾಚಾರವನ್ನು ತೊಡೆದು ಹಾಕುವ ಮಾತು ಹೇಳುತ್ತಿದ್ದಾರೆ. ನಿಜಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಅಂತಹ ಮನಃಸ್ಥಿತಿ ಇಲ್ಲ ಎಂದು ಹೆಚ್.ಡಿ.ಕುಮಾರಸ್ವಾಮಿ ಅವರು ಕಟುವಾಗಿ ಟೀಕಿಸಿದರು.
ಈ ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ವಸೂಲಿಗೆ ಆ ಪಕ್ಷ ಇರೋದು. ಈಸ್ಟ್ ಇಂಡಿಯಾ ಕಂಪನಿ ಇಡೀ ದೇಶವನ್ನು ಇವರಿಗೆ ಕೊಟ್ಟು ಹೋದರು. ಈಸ್ಟ್ ಇಂಡಿಯಾ ಕಂಪನಿಯ ವಸೂಲಿಯನ್ನ ಕಾಂಗ್ರೆಸ್ ಮುಂದುವರಿಸಿಕೊಂಡು ಬಂದಿದೆ. ಇಂಥವರು ಭ್ರಷ್ಟಾಚಾರ ನಿಲ್ಲಿಸ್ತಾರಾ? ಎಂದು ಅವರು ಪ್ರಶ್ನಿಸಿದರು.
ಗೃಹ ಇಲಾಖೆಯಲ್ಲಿ ವೈಎಸ್ ಟಿ ಟ್ಯಾಕ್ಸ್ ದಂಧೆಕೋರರು:
ಗೃಹ ಇಲಾಖೆಯಲ್ಲಿ ವರ್ಗಾವಣೆಯ ದಂಧೆ ಬಗ್ಗೆ ಕೇಳಿ ನನಗೆ ತೀವ್ರ ಆಘಾತ ಉಂಟಾಯಿತು. ಪೊಲೀಸರನ್ನು ಹೀಗೆ ಬಳಕೆ ಮಾಡಿಕೊಂಡರೆ ಕಾನೂನು ಸುವ್ಯವಸ್ಥೆ ಕಾಪಾಡುವ ಅವರು ಇನ್ನೇನು ಕೆಲಸ ಮಾಡುತ್ತಾರೆ? ಬ್ರಿಗೇಡ್ ರಸ್ತೆ ಸಮೀಪ ಇರುವ, ಗರುಡಾ ಮಾಲ್ ಹತ್ತಿರದ ಪೊಲೀಸ್ ಮೆಸ್ ನಲ್ಲಿ ನಡೆದ ಸಭೆಯಲ್ಲಿ ಯಾರೆಲ್ಲಾ ಇದ್ದರು? ವೈಎಸ್ ಟಿ ಟ್ಯಾಕ್ಸ್ ಬಾಬ್ತುನವರು ಅಲ್ಲೇ ಇದ್ದರಲ್ಲವೇ? ಪೊಲೀಸ್ ವರ್ಗಾವಣೆ ಸಂಬಂಧ ನಡೆದ ಈ ಸಭೆಯಲ್ಲಿ ಮುಖ್ಯಮಂತ್ರಿಗಳು, ಗೃಹ ಸಚಿವರು, ಇಲಾಖೆಯ ಉನ್ನತ ಅಧಿಕಾರಿಗಳ ಜತೆಗೆ ಈ ವೈಎಸ್ ಟಿ ಟ್ಯಾಕ್ಸ್ ಕುಳಗಳನ್ನು ಕೂರಿಸಿಕೊಂಡು ಚರ್ಚೆ ಮಾಡಿದ್ದೇಕೆ? ಪೊಲೀಸ್ ಇಲಾಖೆಯ ಸಭೆಯಲ್ಲಿ ಅವರಿಗೇನು ಕೆಲಸ? ಅವರನ್ನು ಒಳಕ್ಕೆ ಬಿತ್ತುಕೊಂಡವರು ಯಾರು? ಎಂದು ಕುಮಾರಸ್ವಾಮಿ ಅವರು ನೇರವಾಗಿ ಪ್ರಶ್ನಿಸಿದರು.
ಭ್ರಷ್ಟಾಚಾರದ ರಿಪೋರ್ಟ್ ಕಾರ್ಡು ಕೊಡಲು ಹೋಗಿರಬೇಕು:
36 ಜನ ಮಂತ್ರಿಗಳನ್ನು ದೆಹಲಿಗೆ ಕರೆದುಕೊಂಡು ಹೋಗಿದ್ದರು. ಅವರ ಹೈಕಮಾಂಡಿಗೆ ರಿಪೋರ್ಟ್ ಕಾರ್ಡು ಕೊಡೋದಕ್ಕೆ ಅವರು ಹೋಗಿದ್ದರಂತೆ. ಅವರು ರಿಪೋರ್ಟ್ ಕಾರ್ಡ್ ಇಡಬೇಕಿರುವುದು ರಾಜ್ಯದ ಆರೂವರೆ ಕೋಟಿ ಜನತೆಯ ಮುಂದೆ ಹೊರತು ಹೈಕಮಾಂಡ್ ಮುಂದೆ ಅಲ್ಲ. ಈ ರಾಜ್ಯದ ಜನರು ವೋಟು ಹಾಕಿ ಇವರನ್ನು ಗೆಲ್ಲಿಸಿದ್ದಾರೆ. ನಾವೇನು ಮಾಡಿದ್ದೇವೆ, ಮಾಡುತ್ತೇವೆ ಎನ್ನುವ ವರದಿಯನ್ನು ಈ ಜನರ ಮುಂದೆ ಇಡಬೇಕು. ಇವರೇನು ಭ್ರಷ್ಟಾಚಾರದ ರಿಪೋರ್ಟ್ ಕಾರ್ಡು ಕೊಡಲು ಹೋಗಿರಬೇಕು ಎಂದು ಅವರು ತರಾಟೆಗೆ ತೆಗೆದುಕೊಂಡರು.
ಇವರು ಲೂಟಿ ಮಾಡುವುದಕ್ಕೆ ಖಜಾನೆ ಖಾಲಿ ಎಂದು ತೋರಿಸುವ ಹುನ್ನಾರ ನಡೆಸಿದ್ದಾರೆ. ಗ್ಯಾರಂಟಿ ಗೊಂದಲ ಮಾಡಿಕೊಂಡು, ವಿಧಾನಸಭೆ ಕ್ಷೇತ್ರಗಳಿಗೆ ಹಣ ಇಲ್ಲ ಎನ್ನುವ ಸಬೂಬು ಹೇಳುತ್ತಿದ್ದಾರೆ. ರಾಜ್ಯದಲ್ಲಿ ಹಣಕ್ಕೆ ಕೊರತೆ ಇಲ್ಲ. ಖಜಾನೆ ಸಮೃದ್ಧವಾಗಿದೆ. ಕಾಂಗ್ರೆಸ್ ಶಾಸಕರೇ ಅಭಿವೃದ್ಧಿಗೆ ಹಣ ಇಲ್ಲ ಎಂದು ಹೇಳುತ್ತಿದ್ದಾರೆ. ನನಗೆ ನಿಜಕ್ಕೂ ಆಶ್ಚರ್ಯ ಆಗುತ್ತಿದೆ ಎಂದು ಅವರು ಹೇಳಿದರು.
ಹಣಕಾಸು ಬಗ್ಗೆ ಶ್ವೇತಪತ್ರ ಹೊರಡಿಸಿ:
ಗ್ಯಾರಂಟಿಗಳಿಗೆ 20ರಿಂದ 25 ಸಾವಿರ ಕೋಟಿ ರೂಪಾಯಿ ಸಾಕು. ಕಳೆದ ವರ್ಷ 40,000 ಕೋಟಿ ರೂಪಾಯಿ ಹೆಚ್ಚುವರಿ ತೆರಿಗೆ ಆದಾಯ ಬಂದಿದೆ. ತೆರಿಗೆಯ ಎಲ್ಲಾ ಬಾಬ್ತುಗಳಲ್ಲಿ ನಿರೀಕ್ಷೆಗೂ ಮೀರಿ ತೆರಿಗೆ ಸಂಗ್ರಹ ಆಗಿದೆ. ಹಾಗಾದರೆ ಹದಿನಾಲ್ಕು ಬಜೆಟ್ ಮಂಡಿಸಿದ ಮಹಾನುಭಾವರು ಕೊರತೆ ಬಜೆಟ್ ಮಂಡಿಸಿದ್ದು ಯಾಕೆ? ಅದರ ಹಿಂದಿನ ಹುನ್ನಾರ ಏನು ಅವರು ಕೇಳಿದರು.
ರಾಜ್ಯದಲ್ಲಿ ಹಣದ ಕೊರತೆ ಇಲ್ಲ. ದೊಡ್ಡ ನಾಟಕ ನಡೆಯುತ್ತಿದೆ. ಒಂದು ಕಡೆ ಸಾಲ ಪ್ರಮಾಣ ಹೆಚ್ಚಳ ಮಾಡಿಕೊಂಡಿದ್ದಾರೆ, ಇನ್ನೊಂದು ತೆರಿಗೆ ಸಂಗ್ರಹದಲ್ಲಿ ಗುರಿ ಮೀರಿದ ಸಾಧನೆ ಆಗಿದೆ. ಕೇಂದ್ರ ಸರಕಾರದಿಂದಲೂ ಯಾವುದೇ ಬಾಕಿ ಇಲ್ಲ. ನಾನು ಸಿಎಂ ಆಗಿದ್ದಾಗ ರೈತರ ಸಾಲ ಮನ್ನಾ ಮಾಡಲು 25,000 ಕೋಟಿ ರೂಪಾಯಿ ನೀಡಿದ್ದೆ. ಅಭಿವೃದ್ಧಿ ಎಲ್ಲೂ ನಿಲ್ಲಲಿಲ್ಲ, ಶಾಸಕರ ಅನುದಾನಕ್ಕೆ ಕೂಡ ಕತ್ತರಿ ಬೀಳಲಿಲ್ಲ. ಅವರ ಭಾಗ್ಯಗಳಿಗೂ ಹಣ ನೀಡಿದೆ. ಎಲ್ಲವನ್ನೂ ಜನರ ಮುಂದೆ ಇಡಿ. ನಿಮಗೆ ಧೈರ್ಯ ಇದ್ದರೆ ಶ್ವೇತಪತ್ರ ಹೊರಡಿಸಿ ಎಂದು ಮಾಜಿ ಮುಖ್ಯಮಂತ್ರಿ ಅವರು ಒತ್ತಾಯ ಮಾಡಿದರು.
ಡಿಕೆಶಿಗೆ ಟಾಂಗ್ ಕೊಟ್ಟ ಮಾಜಿ ಮುಖ್ಯಮಂತ್ರಿ:
ನಾನು ಪ್ರವಾಸ ಹೋಗಿದ್ದು ಯುರೋಪ್ ದೇಶಗಳಿಗೆ. ನನ್ನ ಕುಟುಂಬ ಸದಸ್ಯರು, ಸಹೋದರ, ಸಹೋದರಿಯರ ಜತೆ ತೆರಳಿದ್ದೆ. ಆದರೆ ಇಲ್ಲಿ ಕುಮಾರಸ್ವಾಮಿ ಅವರು ಸಿಂಗಾಪುರಕ್ಕೆ ಹೋಗಿ ಸರಕಾರ ಕೆಡವಲು ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ವದಂತಿ ಹಬ್ಬಿಸಿದರು. ಇದು ನಮ್ಮ ರಾಜ್ಯದ ಬೇಹುಗಾರಿಕೆ ಇಲಾಖೆ ಕೆಲಸ ಮಾಡುತ್ತಿರುವ ರೀತಿ ಎಂದು ಕುಮಾರಸ್ವಾಮಿ ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
ಕೇವಲ 19 ಕ್ಷೇತ್ರ ಗೆದ್ದಿರುವ ಕುಮಾರಸ್ವಾಮಿ ಬಗ್ಗೆ 136 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿರುವ ಕಾಂಗ್ರೆಸ್ ಪಕ್ಷಕ್ಕೆ ಭಯವಿದೆ. ಅವರಿಗೆ ಬಹುಮತ ಇದ್ದರೂ ಸುಸ್ಥಿರ ಸರಕಾರ ನೀಡಲು ಸಾಧ್ಯವಿಲ್ಲ. ಅವರು ಅಭದ್ರತೆಯ ಭಾವದಿಂದ ಬಳಲುತ್ತಿದೆ ಎಂದು ಅವರು ಟೀಕಾಪ್ರಹಾರ ನಡೆಸಿದರು.
ಡಿಕೆ ಶಿವಕುಮಾರ್ ಅವರು ಯಾಕೆ ಈ ರೀತಿ ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ. ಅವರಿಗೆ ಈ ಸರಕಾರ ಪೂರ್ಣಾವಧಿಗೆ ಇರುತ್ತದೆ ಎನ್ನುವ ನಂಬಿಕೆ ಇದ್ದಂತೆ ಇಲ್ಲ. ಅವರು ಹೆಚ್ಚಾಗಿ ಶಾಸ್ತ್ರ ಜ್ಯೋತಿಷ್ಯ ಕೇಳುತ್ತಾರೆ, ಜ್ಯೋತಿಷ್ಯದ ಮೂಲಕ ಚುನಾವಣೆಗಾಗಿ ಕೃತಕವಾದ ಶಕ್ತಿ ತುಂಬಿಕೊಂಡಿದ್ದಾರೆ, ಆ ಶಕ್ತಿ ಬಹಳ ದಿನ ಇರೋದಿಲ್ಲ ಅನ್ನುವುದು ಅವರಿಗೆ ತಲೆ ಒಳಗೆ ಇರಬಹುದು. ಅದಕ್ಕೆ ಅವರು ಈ ಹೇಳಿಕೆ ಕೊಟ್ಟಿರಬಹುದು ಎಂದು ಅವರು ಟಾಂಗ್ ಕೊಟ್ಟರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.