ನವದೆಹಲಿ : ದೇಶದಲ್ಲಿ ಮಾಹಿತಿ ತಂತ್ರಜ್ಞಾನ ಕ್ರಾಂತಿಗೆ ಕಾರಣರಾದ  ಮಾಜಿ ಪ್ರಧಾನಿ ರಾಜೀವ್​ ಗಾಂಧಿ ಅವರ 75 ನೇ ಜನ್ಮದಿನವನ್ನು ಅದ್ಧೂರಿಯಿಂದ ಆಚರಿಸಲು ಕಾಂಗ್ರೆಸ್​ ಪಕ್ಷ ಸಿದ್ಧತೆ ನಡೆಸಿದೆ.


COMMERCIAL BREAK
SCROLL TO CONTINUE READING

ಇದೇ ಆಗಸ್ಟ್​ 20ರಂದು ಮಾಜಿ ಪ್ರಧಾನಿ ರಾಜೀವ್​ ಗಾಂಧಿ ಅವರ ಹುಟ್ಟುಹಬ್ಬವಾಗಿದ್ದು ಅಂದು ದೇಶಾದ್ಯಂತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ. ಈಗಾಗಲೇ ಪ್ರದೇಶ ಕಾಂಗ್ರೆಸ್ ಸಮಿತಿಗಳಿಗೂ ಈ‌ ಸಂದೇಶ ರವಾನಿಸಿದೆ.


ರಾಜೀವ್​ ಗಾಂಧಿ ಅವರ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಯಾವ್ಯಾವ ನಾಯಕರು ಯಾವ್ಯಾವ ಜವಾಬ್ದಾರಿ ವಹಿಸಿಕೊಳ್ಳಬೇಕು? ಹೇಗೆ ಸಿದ್ಧತೆ ಮಾಡಬೇಕು ಎಂಬುದನ್ನು ಚರ್ಚಿಸಲು ಮಂಗಳವಾರ ರಾತ್ರಿ ದೆಹಲಿಯ ಎಐಸಿಸಿ ಕಚೇರಿಯಲ್ಲಿ ಸಭೆ ನಡೆಸಲಾಗಿದೆ. ಆಗಸ್ಟ್ 20 ರಂದು ದೇಶಾದ್ಯಂತ ಕಾರ್ಯಕ್ರಮಗಳನ್ನು ನಡೆಸುವುದರ ಜೊತೆಗೆ ದೆಹಲಿಯಲ್ಲಿ ಆಗಸ್ಟ್​ 22ರಂದು ಅದ್ಧೂರಿ ಸಮಾರಂಭ ಹಮ್ಮಿಕೊಳ್ಳುವುದಕ್ಕೂ ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.


ಲೋಕಸಭೆ ಚುನಾವಣೆಯ ಸೋಲಿನ‌ ಬಳಿಕ ಕಾರ್ಯಕರ್ತರು ಪಕ್ಷ ಸಂಘಟನೆ ಬಗ್ಗೆ ಉತ್ಸಾಹ ಕಳೆದುಕೊಳ್ಳುತ್ತಿದ್ದಾರೆ. ರಾಜೀವ್​ ಗಾಂಧಿಯವರ ಹುಟ್ಟುಹಬ್ಬ ಆಚರಣೆಯ ಮೂಲಕ ಮತ್ತೆ ಕಾರ್ಯಕರ್ತರು ಸಾರ್ವಜನಿಕರನ್ನು ತಲುಪಿ, ಪಕ್ಷ ಬಲವರ್ಧನೆ ಮುಂದಾಗುವಂತೆ ಮಾಡಲು ಈ ರೀತಿಯ ಅದ್ಧೂರಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಲಾಗುತ್ತಿದೆ.


ಪ್ರತಿ ರಾಜ್ಯದ, ಜಿಲ್ಲೆ, ಬ್ಲಾಕ್​ ಮಟ್ಟದಲ್ಲಿ ಸಾಮಾನ್ಯ ಜನರೊಂದಿಗೆ ಹೆಚ್ಚೆಚ್ಚು ಸಂಪರ್ಕದಲ್ಲಿರಿ. ಪ್ರತಿದಿನದ ಆಗುಹೋಗುಗಳನ್ನು ಗಮನಿಸಿ.‌ ರಕ್ತದಾನ ಶಿಬಿರ, ಸಸಿ ನೆಡುವಿಕೆಯಂತಹ ಸಾಮಾಜಿಕ ಕೆಲಸಗಳನ್ನು ಕೈಗೊಳ್ಳಿ. ಜನರೊಂದಿಗೆ ಚರ್ಚಾ ಸಭೆ, ಸಮ್ಮೇಳನಗಳನ್ನು ಏರ್ಪಿಡಿಸಿ ಎಂದು ಕಾಂಗ್ರೆಸ್​ ಸಂಘಟನಾ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್​ ಅವರು ಕಾಂಗ್ರೆಸ್​ ಕಾರ್ಯಕರ್ತರಿಗೆ ಈಗಾಗಲೇ ಸೂಚಿಸಿದ್ದಾರೆ.