ನವದೆಹಲಿ: ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಡವರ ಬ್ಯಾಂಕ್ ಖಾತೆಗೆ ವಾರ್ಷಿಕ 72,000 ರೂ. ಹಣ ಜಮಾ ಮಾಡಲಾಗುವುದು ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸೋಮವಾರ ಮಹತ್ವದ ಘೋಷಣೆ ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ಇಂದಿಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕನಿಷ್ಠ ಮೂಲಭೂತ ಆದಾಯ ಖಾತರಿ ಯೋಜನೆಯಡಿಯಲ್ಲಿ ಬಡ ಕುಟುಂಬಗಳ ಖಾತೆಗೆ ವಾರ್ಷಿಕ  72,000 ರೂ. ಹಣ ಜಮಾ ಮಾಡಲಾಗುವುದು ಎಂದರು.


ಕಳೆದ ಐದು ವರ್ಷಗಳಲ್ಲಿ ಬಡವರು ಸಾಕಷ್ಟು ತೊಂದರೆಗಳನ್ನು ಎದುರಿಸಿದ್ದಾರೆ. ಹಾಗಾಗಿ ನಾವು ಕನಿಷ್ಟ ಆದಾಯ ಖಾತರಿ ಯೋಜನೆಯ ಲಾಭವನ್ನು ನೀಡಲು ಬಯಸುತ್ತೇವೆ. ಈ ಯೋಜನೆಯಡಿ, ದೇಶದ ಪ್ರತಿ ವ್ಯಕ್ತಿಯ ಕನಿಷ್ಟ ಆದಾಯ 12 ಸಾವಿರ ರೂ. ಆಗಿದ್ದು, ಭಾರತದ ಬಡ ಕುಟುಂಬಗಳ ಬ್ಯಾಂಕ್ ಖಾತೆಗೆ ವಾರ್ಷಿಕವಾಗಿ 72,000 ರೂಪಾಯಿಗಳನ್ನು ನೇರವಾಗಿ ವರ್ಗಾಯಿಸುತ್ತೇವೆ ಎಂದು ರಾಹುಲ್ ಗಾಂಧಿ ಭರವಸೆ ನೀಡಿದರು.


ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಅತೀ ಶ್ರೀಮಂತ ಜನರ ಸಾಲ ಮನ್ನಾ ಮಾಡಲು ಸಾಧ್ಯವಾಗಿರುವಾಗ, ಕಾಂಗ್ರೆಸ್ ದೇಶದ ಶೇ.20 ಕಡು ಬಡ ಕುಟುಂಬಗಳಿಗೆ ವಾರ್ಷಿಕವಾಗಿ 72 ಸಾವಿರ ರೂ. ಹಣ ನೀಡುವುದು ಖಂಡಿತಾ ಸಾಧ್ಯ. ಈ ಯೋಜನೆಯಿಂದ ಐದು ಕೋಟಿ ಕುಟುಂಬಗಳು ಅಥವಾ 25 ಕೋಟಿ ಬಡ ಜನರು ನೇರ ಪ್ರಯೋಜನ ಪಡೆಯಲಿದ್ದಾರೆ. ಈಗಾಗಲೇ ಈ ಯೋಜನೆಗೆ ಸಂಬಂಧಿಸಿದ ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದ್ದು, ವಿಶ್ವದ ಯಾವುದೇ ರಾಷ್ಟ್ರದಲ್ಲಿ ಇಂತಹ ಯೋಜನೆ ಜಾರಿಯಾಗಿಲ್ಲ. ಈ ಮೂಲಕ ಆರ್ಥಿಕವಾಗಿ ಹಿಂದುಳಿದ ಬಡವರಿಗೆ ಮಾಸಿಕ ತಲಾ 12,000 ರೂ.ಗಳ ಮೂಲ ಕನಿಷ್ಠ ಆದಾಯವನ್ನು ಖಾತ್ರಿಪಡಿಸುವುದಾಗಿ ರಾಹುಲ್ ಹೇಳಿದರು. 


ಲೋಕಸಭೆ ಚುನಾವಣೆ ಪ್ರಚಾರ ಸಭೆಗಳಲ್ಲಿ ಇದುವರೆಗೂ ವಾಯು ದಾಳಿ, ರಫೇಲ್ ಯುದ್ಧ ವಿಮಾನ, ನಿರುದ್ಯೋಗ ಮೊದಲಾದ ವಿಚಾರಗಳನ್ನೇ ಚರ್ಚಿಸುತ್ತಿದ್ದ ರಾಹುಲ್ ಗಾಂಧಿ, ಇದೀಗ ದೇಶದ ಜನರ ಕನಿಷ್ಠ ಆದಾಯದ ಬಗ್ಗೆ, ಹೊಸ ಯೋಜನೆ ಬಗ್ಗೆ ಪ್ರಸ್ತಾಪಿಸುವ ಮೂಲಕ ಮತದಾರರನ್ನು ಆಕರ್ಷಿಸಲು ಮುಂದಾಗಿದ್ದಾರೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.