ಲೋಕಸಭಾ ಚುನಾವಣೆಗೆ 7ನೇ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್; ಫತೇಪುರ್ ಸಿಕ್ರಿಯಿಂದ ರಾಜ್ ಬಬ್ಬರ್ ಸ್ಪರ್ಧೆ!
ಛತ್ತೀಸ್‌ಗಢ, ಮಹಾರಾಷ್ಟ್ರ, ಓಡಿಶಾ, ತಮಿಳುನಾಡು, ತೆಲಂಗಾಣ, ತ್ರಿಪುರ, ಉತ್ತರ ಪ್ರದೇಶ ಮತ್ತು ಪುದುಚೇರಿ ರಾಜ್ಯಗಳ ಲೋಕಸಭಾ ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆ ಮಾಡಿದೆ.
ನವದೆಹಲಿ: ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ 7ನೇ ಪಟ್ಟಿಯನ್ನು ಶುಕ್ರವಾರ ತಡರಾತ್ರಿ ಬಿಡುಗಡೆ ಮಾಡಿದ್ದು, 35 ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ.
35 ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿರುವ ಕಾಂಗ್ರೆಸ್ ಈ ಬಾರಿ ಮಹತ್ವದ ಬದಲಾವಣೆ ಮಾಡಿದ್ದು, ಉತ್ತರಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಾಜ್ ಬಬ್ಬರ್ ಈ ಬಾರಿ ಉತ್ತರಪ್ರದೇಶದ ಮೊರಾದಾಬಾದ್ ನಿಂದ ಸ್ಪರ್ಧಿಸದೆ ಫತೇಪುರ್ ಸಿಕ್ರಿಯಿಂದ ಸ್ಪರ್ಧಿಸುತ್ತಿದ್ದಾರೆ. ಉಳಿದಂತೆ ಛತ್ತೀಸ್‌ಗಢ, ಮಹಾರಾಷ್ಟ್ರ, ಓಡಿಶಾ, ತಮಿಳುನಾಡು, ತೆಲಂಗಾಣ, ತ್ರಿಪುರ, ಉತ್ತರ ಪ್ರದೇಶ ಮತ್ತು ಪುದುಚೇರಿ ರಾಜ್ಯಗಳ ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆಯಾಗಿದೆ.
ಮೂಲಗಳ ಪ್ರಕಾರ, ಉತ್ತರಪ್ರದೇಶ ಕಾಂಗ್ರೆಸ್ ಅಧ್ಯಕ್ಷ ರಾಜ್ ಬಬ್ಬರ್ ಅವರು ಮೊರಾದಾಬಾದ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ಫತೇಪುರ್ ಸಿಕ್ರಿಯಿಂದ ಟಿಕೆಟ್ ನೀಡಲಾಗಿದೆ ಎನ್ನಲಾಗಿದೆ. ಎಸ್ಪಿ-ಬಿಎಸ್ಪಿ ಮೈತ್ರಿಕೂಟದಲ್ಲಿ ಬಿಎಸ್ಪಿ ಘೋಷಿಸಿದ ಜಾಟ್ ಅಭ್ಯರ್ಥಿಯನ್ನು ಘೋಷಿಸಿದ ಬೆನ್ನಲ್ಲೇ ಬಬ್ಬರ್ ಫತೇಪುರ್ ಸಿಕ್ರಿಯಿಂದ ಸ್ಪರ್ಧಿಸುತ್ತಿದ್ದು, ಬಿಜೆಪಿ ಅಭ್ಯರ್ಥಿ ರಾಜಕುಮಾರ್ ಚಹಾರ್ ನಡುವೆ ತೀವ್ರ ಪೈಪೋಟಿ ಏರ್ಪಡಲಿದೆ ಎನ್ನಲಾಗಿದೆ.
ಇದುವರೆಗೂ ಮೊರಾದಾಬಾದ್ ಕ್ಷೇತ್ರದ ಅಭ್ಯರ್ಥಿಯಾಗಿ ರಾಜ್ ಬಬ್ಬರ್ ಅವರನ್ನೇ ಘೋಷಿಸಲಾಗಿತ್ತು. ಆದರೆ, ಕಾಂಗ್ರೆಸ್ ಹೈಕಮಾಂಡ್ ಪಟ್ಟಿಯಲ್ಲಿ ಮಹತ್ವದ ಬದಲಾವಣೆ ಮಾಡಿದ್ದು, ಇದೀಗ ಮೊರಾದಾಬಾದ್ ಕ್ಷೇತ್ರದಿಂದ ಇಮ್ರಾನ್ ಪ್ರತಾಪ್ ಗಡಿ ಸ್ಪರ್ಧಿಸಲಿದ್ದಾರೆ. ಮತ್ತೊಂದೆಡೆ, ಬಿಜ್ನುರ್ ಕ್ಷೇತ್ರದಿಂದ ಇಂದಿರಾ ಭಾಟಿಯಾ ಬದಲಾಗಿ ನಸೀಮುದ್ದೀನ್ ಸಿದ್ದಿಕ್ ಗೆ ಕಾಂಗ್ರೆಸ್ ಟಿಕೆಟ್ ನೀಡಿದೆ.