`ಸದ್ದಿಲ್ಲದೆ ಸಿಎಂ ಪದಗ್ರಹಣ, ಮಹಾರಾಷ್ಟ್ರ ಇತಿಹಾಸದಲ್ಲೇ ಕಪ್ಪು ಚುಕ್ಕೆ`; ಕಾಂಗ್ರೆಸ್
ಬಹುಮತ ಸಾಬೀತು ಪಡಿಸುವಲ್ಲಿ ಬಿಜೆಪಿಯನ್ನು ಸೋಲಿಸುವುದಾಗಿ ಕಾಂಗ್ರೆಸ್ ಹಿರಿಯ ಮುಖಂಡ ಅಹ್ಮದ್ ಪಟೇಲ್ ಹೇಳಿದ್ದಾರೆ.
ಮುಂಬೈ: ಮಹಾರಾಷ್ಟ್ರದ ರಾಜಕೀಯ ಪರಿಸ್ಥಿತಿಯ ಬಗ್ಗೆ ಕಾಂಗ್ರೆಸ್ ಮುಖಂಡ ಅಹ್ಮದ್ ಪಟೇಲ್ ಅವರು, ಇಂದು ಬೆಳಿಗ್ಗೆ ಬ್ಯಾಂಡ್, ಬಾಜಾ ಮತ್ತು ಬರಾತ್ ಇಲ್ಲದೆ(ಸದ್ದಿಲ್ಲದೆ) ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ಪ್ರಮಾಣವಚನ ಸ್ವೀಕರಿಸಲಾಗಿದೆ. ರಾಜ್ಯದಲ್ಲಿ ಯಾವುದೇ ಪ್ರಕ್ರಿಯೆ ಇಲ್ಲದೆ ಸರ್ಕಾರ ರಚನೆಯಾಯಿತು. ಈ ಘಟನೆಯನ್ನು ಮಹಾರಾಷ್ಟ್ರದ ಇತಿಹಾಸದಲ್ಲಿ ಕಪ್ಪು ಚುಕ್ಕೆ ಆಗಿಳಿಯಲಿದೆ ಎಂದು ಹೇಳಿದರು.
ಬಿಜೆಪಿ, ಶಿವಸೇನೆ, ಎನ್‌ಸಿಪಿಯನ್ನು ರಾಜ್ಯಪಾಲರು ಆಹ್ವಾನಿಸಿದ್ದಾರೆ, ಆದರೆ ಕಾಂಗ್ರೆಸ್‌ಗೆ ಅವಕಾಶ ನೀಡಿಲ್ಲ ಎಂದು ಆರೋಪಿಸಿದ ಅಹ್ಮದ್ ಪಟೇಲ್, ಮಹಾರಾಷ್ಟ್ರ ಸರ್ಕಾರವನ್ನು ಬೆಳಿಗ್ಗೆ ಅವಸರವಸರದಲ್ಲಿ ರಚಿಸಲಾಗಿದೆ. ಖಂಡಿತವಾಗಿಯೂ ಎಲ್ಲೋ ಏನೋ ತಪ್ಪಾಗಿದೆ. ಸಂವಿಧಾನವನ್ನು ನಂಬಿದವರ ಮುಂದೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕೆಡವಲಾಯಿತು. ಅವರು ನಾಚಿಕೆಗೇಡಿನ ಕೆಲಸ ಮಾಡಿದ್ದಾರೆ. ಮಹಾರಾಷ್ಟ್ರದ ಜನರಿಗೆ ಮೋಸ ಮಾಡಿದ್ದಾರೆ ಎಂದು ವಾಗ್ಧಾಳಿ ನಡೆಸಿದರು.
ಈ ಹೋರಾಟದಲ್ಲಿ ಮೂರು (ಕಾಂಗ್ರೆಸ್-ಎನ್‌ಸಿಪಿ-ಶಿವಸೇನೆ) ಪಕ್ಷಗಳು ಒಟ್ಟಾಗಿವೆ ಎಂದು ಸ್ಪಷ್ಟಪಡಿಸಿದ ಅಹ್ಮದ್ ಪಟೇಲ್, ಬಹುಮತ ಸಾಬೀತು ಪಡಿಸುವಲ್ಲಿ ಬಿಜೆಪಿಯನ್ನು ಸೋಲಿಸುತ್ತೇವೆ ಎಂಬ ವಿಶ್ವಾಸವಿದೆ ಎಂದು ನುಡಿದರು. ಕಾಂಗ್ರೆಸ್ ಪಕ್ಷದ ಕೆಲ ಶಾಸಕರೂ ಬಿಜೆಪಿಗೆ ಬೆಂಬಲ ನೀಡಲಿದ್ದಾರೆ ಎಂಬ ಊಹಾಪೋಹಗಳ ಬಗ್ಗೆ ಪ್ರತಿಕ್ರಿಯಿಸಿದ ಅವ್ರು, ಇಬ್ಬರು ಶಾಸಕರನ್ನು ಹೊರತುಪಡಿಸಿ, ಕಾಂಗ್ರೆಸ್ ಎಲ್ಲ ಶಾಸಕರು ಇಲ್ಲಿದ್ದಾರೆ. ಆ ಇಬ್ಬರು ಶಾಸಕರೂ ಕೂಡ ಸದ್ಯ ಅವರ ಊರುಗಳಲ್ಲಿದ್ದಾರೆ. ಆದರೆ ಅವರೂ ನಮ್ಮೊಂದಿಗಿದ್ದಾರೆ ಎಂದು ಸ್ಪಷ್ಟನೆ ನೀಡಿದರು.
ಅದೇ ಸಮಯದಲ್ಲಿ, ಶಿವಸೇನೆ-ಎನ್‌ಸಿಪಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಸೇರ್ಪಡೆಗೊಳ್ಳದಿರುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಮುಖಂಡರು, ಮೊದಲೇ ನಿರ್ಧರಿಸಿದ ಸಭೆಯಿಂದಾಗಿ ನಾವು ಜಂಟಿ ಪತ್ರಿಕಾಗೋಷ್ಠಿಗೆ ಹೋಗಲು ಸಾಧ್ಯವಿಲ್ಲ ಎಂದು ಹೇಳಿದರು.