ಮುಂಬೈ: ಕಲಂ 370 ಮತ್ತು 35 ಎ ವಿಧಿಗಳನ್ನು ರದ್ದುಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಗೃಹ ಸಚಿವ ಅಮಿತ್ ಶಾ ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದಾರೆ. 


COMMERCIAL BREAK
SCROLL TO CONTINUE READING

ಮುಂಬೈನಲ್ಲಿ ನಡೆದ ರ್ಯಾಲಿಯೊಂದನ್ನುದ್ದೇಶಿಸಿ ಮಾತನಾಡಿದ ಶಾ, ಕಾಶ್ಮೀರವನ್ನು ಕಾಂಗ್ರೆಸ್ ರಾಜಕೀಯದ ದೃಷ್ಟಿಯಲ್ಲಿ ನೋಡುತ್ತದೆ, ಆದರೆ ನಾವು ದೇಶಪ್ರೇಮದ ದೃಷ್ಟಿಯಲ್ಲಿ ಕಾಣುತ್ತೇವೆ ಎಂದು ಹೇಳುವ ಮೂಲಕ 370 ನೇ ವಿಧಿಯನ್ನು ರದ್ದುಗೊಳಿಸುವ ಮತ್ತು ಜಮ್ಮು ಮತ್ತು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾದ ಜೆ & ಕೆ ಮತ್ತು ಲಡಾಕ್ ಎಂದು ವಿಭಜಿಸುವ ನಿರ್ಧಾರವನ್ನು ವಿರೋಧಿಸಿದ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. 


"370 ನೇ ವಿಧಿ ಒಂದು ರಾಜಕೀಯ ವಿಷಯ ಅಂತ ರಾಹುಲ್ ಗಾಂಧಿ ಹೇಳುವ ರಾಹುಲ್ ಗಾಂಧೀ ಇತ್ತೀಚೆಗಷ್ಟೇ ರಾಜಕೀಯಕ್ಕೆ ಬಂದಿದ್ದಾರೆ. ಆದರೆ ಜನಸಂಘ ಮತ್ತು ಬಿಜೆಪಿಯ ಮೂರು ತಲೆಮಾರುಗಳು ಕಾಶ್ಮೀರಕ್ಕಾಗಿ ತಮ್ಮ ಜೀವನವನ್ನು ಅರ್ಪಿಸಿವೆ. ಕಾಶ್ಮೀರ ವಿಚಾರ ಕಾಂಗ್ರೆಸ್ ಪಕ್ಷಕ್ಕೆ ರಾಜಕೀಯ ವಿಷಯವಾಗಿದೆ. ಆದರೆ ನಮಗೆ ಅದು ದೇಶಭಕ್ತಿಯ ವಿಚಾರ" ಎಂದು ಶಾ ಹೇಳಿದರು.


"ಕಾಶ್ಮೀರವನ್ನು ಭಾರತದ ಅವಿಭಾಜ್ಯ ಅಂಗವೆಂದು ಹೇಳುತ್ತಾರೆ. ಆದರೆ ಮಹಾರಾಷ್ಟ್ರ ಅಥವಾ ಕರ್ನಾಟಕವನ್ನು ಭಾರತದ ಅವಿಭಾಜ್ಯ ಅಂಗ ಎಂದು ಯಾರೂ ಹೇಳಲಿಲ್ಲ. ಇಂದು, ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದೆ ಎಂದು ನಾನು ಹೆಮ್ಮೆಯಿಂದ ಹೇಳಬಲ್ಲೆ" ಎಂದು ಶಾ ಹೇಳಿದರು.


ಜಮ್ಮು ಮತ್ತು ಕಾಶ್ಮೀರದ ಹಿಂದಿನ ರಾಜ್ಯ ಸರ್ಕಾರಗಳ ವಿರುದ್ಧ ವಾಗ್ದಾಳಿ ನಡೆಸಿದ ಅಮಿತ್ ಶಾ, ರಾಜ್ಯದಲ್ಲಿ ಪ್ರಮುಖ ಭ್ರಷ್ಟ ಸರ್ಕಾರಗಳ ಆಡಳಿತ ನಡೆಸಿದ ಮಾಜಿ ಮುಖ್ಯಮಂತ್ರಿಗಳಾದ ಮೆಹಬೂಬಾ ಮುಫ್ತಿ ಮತ್ತು ಫಾರೂಕ್ ಅಬ್ದುಲ್ಲಾ ಅವರ ಕುಟುಂಬಗಳ ಮೇಲೆ ಪರೋಕ್ಷ ದಾಳಿ ನಡೆಸಿದರು. ಇವರ್ಯಾರೂ ಜಮ್ಮು-ಕಾಶ್ಮೀರದಲ್ಲಿ ಭ್ರಷ್ಟಾಚಾರ-ವಿರೋಧಿ ಘಟಕವನ್ನು ಹೊಂದಲು ಎಂದಿಗೂ ಬಯಸಲಿಲ್ಲ. ಆದರೀಗ ಅಲ್ಲಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಕಾರ್ಯನಿರ್ವಹಿಸುತ್ತಿದೆ. ಶೀಘ್ರದಲ್ಲೇ ಕಾಶ್ಮೀರದಲ್ಲಿ ಚುನಾವಣೆಗಳು ನಡೆಯಲಿದೆ ಎಂದು ಹೇಳಿದರು.