ನವದೆಹಲಿ: ಕಾಂಗ್ರೆಸ್ ಪಕ್ಷದಲ್ಲಿ ನಡೆಯುತ್ತಿರುವ ನಾಯಕತ್ವದ ಬಿಕ್ಕಟ್ಟಿನ ಮಧ್ಯೆ ಈಗ ಹಂಗಾಮಿ ಅಧ್ಯಕ್ಷರನ್ನು ನೇಮಕ ಮಾಡಲು ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಮುಂದಿನ ವಾರ ಸಭೆ ಸೇರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಮೂಲಗಳ ಪ್ರಕಾರ ಮುಂದಿನ ವಾರ ಸಿಡಬ್ಲ್ಯುಸಿ ಸಭೆ ದಿನಾಂಕವನ್ನು ನಿಗದಿಪಡಿಸಲಾಗುವುದು. ಆಗ ನೂತನ ಹಂಗಾಮಿ ಅಧ್ಯಕ್ಷರನ್ನು ನೇಮಕ ಮಾಡಲಾಗುವುದು ಎನ್ನಲಾಗಿದೆ.


COMMERCIAL BREAK
SCROLL TO CONTINUE READING

2019 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸೋಲಿನ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡು ರಾಹುಲ್ ಗಾಂಧಿ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಕಾಂಗ್ರೆಸ್ ಈಗ ಬಿಕ್ಕಟ್ಟನ್ನು ಎದುರಿಸುತ್ತಿದೆ. ಇತ್ತೀಚಿಗೆ ಕಾಂಗ್ರೆಸ್ ನಾಯಕ ಜ್ಯೋತಿರಾಧಿತ್ಯ ಸಿಂಧ್ಯ ಮಾತನಾಡಿ 'ನಮಗೆ ಅಪಾರ ಶಕ್ತಿಯಿರುವ ವ್ಯಕ್ತಿ ನೂತನ ಅಧ್ಯಕ್ಷರಾಗಬೇಕು. ಪಕ್ಷದ ಎಲ್ಲ ಸದಸ್ಯರು ಒಗ್ಗಟ್ಟಾಗಿ  ರಾಹುಲ್ ತೋರಿಸಿದ ಹಾದಿಯಲ್ಲಿ ನಡೆಯಬೇಕು' ಎಂದು ಸಿಂಧಿಯಾ ಹೇಳಿದ್ದರು.


ಇತ್ತೀಚೆಗೆ ಮಧ್ಯಪ್ರದೇಶದ ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ) ಸಚಿವ ಮತ್ತು ಕಾಂಗ್ರೆಸ್ ಮುಖಂಡ ಸಜ್ಜನ್ ಸಿಂಗ್ ವರ್ಮಾ ಅವರು ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಕಾಂಗ್ರೆಸ್ ಮುಖವಾಗಲು ಸೂಕ್ತ  ಅಭ್ಯರ್ಥಿ ಎಂದು ಹೇಳಿದ್ದರು. ಅವರು ಬಿಜೆಪಿ ನಾಯಕರನ್ನು ಎದುರಿಸಲು ಸೂಕ್ತ ವ್ಯಕ್ತಿಯಾಗಿದ್ದಾರೆ. ಈ ಬಿಕ್ಕಟ್ಟಿನಿಂದ ಪಕ್ಷವನ್ನು ಪಾರು ಮಾಡಬಲ್ಲ ಏಕೈಕ ವ್ಯಕ್ತಿ ಎಂದು ವರ್ಮಾ ಹೇಳಿದ್ದರು.  ಕರ್ನಾಟಕ ಹಾಗೂ ಗೋವಾದಲ್ಲಿ ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡುತ್ತಿರುವುದರಿಂದ ಈಗ ಕಾಂಗ್ರೆಸ್ ಪಕ್ಷ ರಾಜಕೀಯ ಬಿಕ್ಕಟ್ಟನ್ನು ಎದುರಿಸುತ್ತಿದೆ. ಈಗ ಈ ಬಿಕ್ಕಟ್ಟನ್ನು ನಿವಾರಿಸಲು ಸೂಕ್ತ ವ್ಯಕ್ತಿಯ ಹುಡುಕಾಟದಲ್ಲಿ ಕಾಂಗ್ರೆಸ್ ಪಕ್ಷ ತೊಡಗಿದೆ.