ನವದೆಹಲಿ: 2019 ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿನ ಬೆನ್ನಲ್ಲೇ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ಶನಿವಾರ ರಾಷ್ಟ್ರ ರಾಜಧಾನಿಯ ಕಾಂಗ್ರೆಸ್ ಮುಖ್ಯ ಕಚೇರಿಯಲ್ಲಿ ಆರಂಭವಾಗಿದೆ.  ಕಾಂಗ್ರೆಸ್ ಹಿರಿಯ ಮುಖಂಡರಾದ ಮಲ್ಲಿಕಾರ್ಜುನ್ ಖರ್ಗೆ, ಸೋನಿಯಾ ಗಾಂಧಿ, ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್, ಪ್ರಿಯಾಂಕಾ ಗಾಂಧಿ ಮತ್ತು ಮೀರಾಕುಮಾರ್ ಅವರು ಸಭೆಯಲ್ಲಿ ಉಪಸ್ಥಿತರಿದ್ದಾರೆ. ಮೂಲಗಳ ಪ್ರಕಾರ ಈ ಸಭೆಯಲ್ಲಿ ಅನೇಕ ಕಾಂಗ್ರೆಸ್ ಮುಖಂಡರು ರಾಜೀನಾಮೆ ನೀಡುವ ಸಾಧ್ಯತೆಯಿದೆ.


COMMERCIAL BREAK
SCROLL TO CONTINUE READING

17 ರಾಜ್ಯಗಳಲ್ಲಿ ಕಾಂಗ್ರೆಸ್ ಗೆ ಶೂನ್ಯ ಸ್ಥಾನ
ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲಿನ ಬಳಿಕ ಸುದ್ದಿಗೋಷ್ಠಿ ನಡೆಸಿದ ರಾಹುಲ್, ಸೋಲಿನ ವಿಮರ್ಶೆಗಾಗಿ ಕಾರ್ಯಕಾರಿ ಸಮಿತಿ ಸಭೆ ನಡೆಸುತ್ತಿರುವುದಾಗಿ ತಿಳಿಸಿದ್ದರು. ಈ ಬಾರಿಯ ಲೋಕಸಭಾ ಚುನಾವಣೆ ಫಲಿತಾಂಶ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಗೆ ಅಚ್ಚರಿ ಮೂಡಿಸಿದೆ. ಪ್ರಧಾನಿ ಮೋದಿ ಅಲೆ ಎಷ್ತರಪತ್ತಿಗೆ ಜನರ ಮೇಲೆ ಪ್ರಭಾವ ಬೀರಿದೆಯೆಂದರೆ 17 ರಾಜ್ಯಗಳಲ್ಲಿ ಕಾಂಗ್ರೆಸ್ ಏಕೈಕ ಸ್ಥಾನವನ್ನೂ ಗಳಿಸದೆ ಪರಾಭವಗೊಂಡಿದೆ.


ಸಭೆಗೆ ಯಾವುದೇ ಅಜೆಂಡಾ ಇಲ್ಲ
ಅಷ್ಟಕ್ಕೂ, ಈ ಸಭೆಯಲ್ಲಿ ಚರ್ಚಿಸಲು ಯಾವುದೇ ಅಜೆಂಡಾವನ್ನು ನಿರ್ಧರಿಸಲಾಗಿಲ್ಲ. ಆದರೆ ಪಕ್ಷದ ಮೂಲಗಳ ಪ್ರಕಾರ ಸಭೆಯಲ್ಲಿ ರಾಹುಲ್ ಅವರ ರಾಜೀನಾಮೆ ಅಂಗೀಕರಿಸಲಾಗುವುದಿಲ್ಲ ಮತ್ತು ಪಕ್ಷವು ಅವರ ನಾಯಕತ್ವದಲ್ಲಿಯೇ ಕೆಲಸ ಮಾಡುತ್ತದೆ ಎನ್ನಲಾಗಿದೆ.  ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಕೇವಲ 5 ತಿಂಗಳ ಹಿಂದಷ್ಟೇ ರಾಜ್ಯ ಸರ್ಕಾರ ರಚನೆಯಾದ ಮಧ್ಯಪ್ರದೇಶ, ಛತ್ತೀಸ್ಗಢ ಮತ್ತು ರಾಜಸ್ತಾನ ರಾಜ್ಯಗಳಲ್ಲಿ ಪಕ್ಷದ ಸೋಲಿಗೆ ಕಾರಣಗಳೇನು ಎಂಬುದನ್ನು ಚರ್ಚಿಸಲಾಗುವುದು ಎಂದು ತಿಳಿದುಬಂದಿದೆ.


ರಾಹುಲ್ ರಾಜೀನಾಮೆ ನೀಡಿಕೆ ಕೇವಲ ವದಂತಿ
ಲೋಕಸಭೆ ಚುನಾವಣೆಯಲ್ಲಿ ಪಕ್ಷ ಸೋಲನುಭವಿಸಿದ ಬಳಿಕ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬುದು ಕೇವಲ ವದಂತಿಯಷ್ಟೇ ಎಂದು ಪಕ್ಷದ ಹಿರಿಯ ನಾಯಕ ಮೀಮ್ ಅಫ್ಜಲ್ ಹೇಳಿದ್ದಾರೆ.


ಸಭೆಯಲ್ಲಿ ತಪ್ಪುಗಳ ವಿಮರ್ಶೆ
ಲೋಕಸಭೆ ಚುನಾವಣೆ ಬಳಿಕ ಇಂದು ನಡೆಯುತ್ತಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಭೆ ಬಹಳ ಮಹತ್ವ ಪಡೆದುಕೊಂಡಿದೆ ಎಂದು ಮೀಮ್ ಅಫ್ಜಲ್ ಹೇಳಿದಾರೆ. ಈ ಸಭೆಯಲ್ಲಿ, ಪಕ್ಷದ ವೈಫಲ್ಯಗಳಿಗೆ ಕಾರಣಗಳೇನು ಎಂಬುದರ ಬಗ್ಗೆ ವಿಮರ್ಶೆ ನಡೆಯಲಿದೆ ಎಂದು ಹೇಳಿದ್ದಾರೆ.