ನವದೆಹಲಿ: ಶೀಘ್ರದಲ್ಲೇ ನೀವು ರಾಷ್ಟ್ರರಾಜಧಾನಿಯಲ್ಲಿನ ಬಸ್ ಗಳಲ್ಲಿ ಪ್ರಯಾಣಿಸುವಾಗ ಮೊಬೈಲ್ ಅಪ್ಲಿಕೇಶನ್‌ನಿಂದ ಮೂಲಕ ಟಿಕೆಟ್ ಖರೀದಿಸಬಹುದಾಗಿದೆ. ಹೌದು,  ದೆಹಲಿ ಸಾರಿಗೆ ನಿಗಮ (ಡಿಟಿಸಿ) ಈ ಸೇವೆಯನ್ನು ಪ್ರಾರಂಭಿಸಲಿದೆ. ಈ ಇ-ಟಿಕೆಟಿಂಗ್ ವ್ಯವಸ್ಥೆಯು ನಿಲ್ದಾಣಕ್ಕೆ ಮುಂದಿನ ಬಸ್ ಯಾವಾಗ ಬರುತ್ತದೆ ಮತ್ತು ಎಷ್ಟು ಪ್ರಯಾಣಿಕರು ಇದ್ದಾರೆ ಎಂಬುದರ ಮಾಹಿತಿ ಕೂಡ ಪ್ರಯಾಣಿಕರಿಗೆ ನೀಡಲಿದೆ.


COMMERCIAL BREAK
SCROLL TO CONTINUE READING

ಪ್ರಯಾಣಿಕರು ಮತ್ತು ಕಂಡಕ್ಟರ್‌ಗಳ ನಡುವೆ ಗರಿಷ್ಠ ಅಂತರವನ್ನು ಖಚಿತಪಡಿಸಿಕೊಳ್ಳಲು ದೆಹಲಿ ಸರ್ಕಾರ ತನ್ನ ಬಸ್‌ಗಳಲ್ಲಿ ಇ-ಟಿಕೆಟಿಂಗ್ ವ್ಯವಸ್ಥೆಯನ್ನು ಪರಿಚಯಿಸಲಿದೆ ಎಂದು ರಾಜ್ಯ ಸಾರಿಗೆ ಸಚಿವ ಕೈಲಾಶ್ ಗೆಹ್ಲೋಟ್ ಹೇಳಿದ್ದಾರೆ. ಈ ಸಂಪರ್ಕವಿಲ್ಲದ ಟಿಕೆಟಿಂಗ್ ವ್ಯವಸ್ಥೆಯನ್ನು ತಯಾರಿಸಲು ಕಾರ್ಯಪಡೆ ರಚಿಸಲಾಗಿದೆ. ಡಿಟಿಸಿ ಮತ್ತು ಕ್ಲಸ್ಟರ್ ಸ್ಕೀಮ್ ಬಸ್ಸುಗಳು ಪ್ರಯಾಣಿಕರಿಗೆ ಈ ಸೌಲಭ್ಯವನ್ನು ಒದಗಿಸಲಿವೆ.


ಈ ಕುರಿತು ಮಾತನಾಡಿರುವ ದೆಹಲಿಯ ಸಾರಿಗೆ ಸಚಿವ ಗೆಹಲೋಟ್, ಕರೋನಾ ಮಹಾಮಾರಿಯ ಕಾಲದಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಸುರಕ್ಷಿತ ಮತ್ತು ಅನುಕೂಲಕರವಾಗಿಸಲು ಇದು ಸಹಾಯ ಮಾಡಲಿದೆ ಎಂದು ಹೇಳಿದ್ದಾರೆ. ದೆಹಲಿಯ ಇಂದ್ರಪ್ರಸ್ಥ ಇನ್‌ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿ ಈ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುತ್ತಿದೆ.


ಕಳೆದ ಗುರುವಾರ ಈ ವ್ಯವಸ್ಥೆಯ ಟ್ರಯಲ್ ರನ್ ನಡೆಸಲಾಗಿದೆ. ಈ ಕುರಿತು ಮಾಹಿತಿ ನೀಡಿರುವ ಸಂಸ್ಥೆಯ ಸಹಾಯಕ ಪ್ರೊಫೆಸರ್ ಪ್ರವೇಶ ಬಿಯಾನಿ, "ಇದೇ ರೀತಿಯ ಟ್ರಯಲ್ ಗಳನ್ನು ಮುಂದೆ ದೆಹಲಿಯ ಸುಮಾರು 6500 ಬಸ್ ಗಳಲ್ಲಿ ನಡೆಸಲಾಗುವುದು. ಸಂಸ್ಥೆಯ ರಾಜನ್ ಗಿರಸಾ, ಅತುಲ್ ಜೈನ್ ಹಾಗೂ ಕ್ಷಿತಿಜ್ ಶ್ರೀವಾಸ್ತವ್ ಅವರು ಈ ಆಪ್ ಸಿದ್ಧಪಡಿಸುತ್ತಿದ್ದಾರೆ. ಇದಲ್ಲದೆ ಒಂದು ಸಾರ್ವಜನಿಕ ಮಾಹಿತಿ ಸಿಸ್ಟಮ್ ಕೂಡ ಸಿದ್ಧಪಡಿಸಲಾಗುತ್ತಿದ್ದು, ಇದನ್ನು ಎಲ್ಲ ಬಸ್ ಸ್ಟಾಪ್ ಗಳಲ್ಲಿ ಡಿಸ್ಪ್ಲೇ ಮಾಡಲಾಗುತ್ತಿದ್ದು, ಇದು ಪ್ರಯಾಣಿಕರಿಗೆ ಮುಂದಿನ ಬಸ್ ಎಷ್ಟು ದೂರದಲ್ಲಿದೆ ಹಾಗೂ ಅದರಲ್ಲಿ ಎಷ್ಟು ಪ್ರಯಾಣಿಕರು ಸಂಚರಿಸುತ್ತಿದ್ದಾರೆ ಎಂಬ ಮಾಹಿತಿ ಕೂಡ ನೀಡಲಿದೆ" ಎಂದು ಹೇಳಿದ್ದಾರೆ.


ಈ ಆಪ್ ಅನ್ನು 'ಒನ್ ಡೆಲ್ಲಿ' ಆಪ್ ಜೊತೆಗೆ ಸೇರಿಸಲಾಗುತ್ತಿದೆ. 'ಒನ್ ಡೆಲ್ಲಿ' ಆಪ್ ಅನ್ನು ಕ್ಲಸ್ಟರ್ ಬಸ್ ಗಳಿಗಾಗಿ ಇಂಟಿಗ್ರೇಟೆಡ್ ಮಲ್ಟಿ - ಮಾಡೆಲ್ ಟ್ರಾನ್ಸಿಟ್ ಸಿಸ್ಟಮ್ ಸಿದ್ಧಪಡಿಸಿದೆ.