ನವದೆಹಲಿ: ದೇಶಾದ್ಯಂತ ಪಸರಿಸಿರುವ ಕೊರೊನಾ ವೈರಸ್ ಭೀತಿಯ ಹಿನ್ನೆಲೆ ದೇಶದೆಲ್ಲೆಡೆ ಲಾಕ್ ಡೌನ್ ಸ್ಥಿತಿ ನಿರ್ಮಾಣಗೊಂಡಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಇರುವ ಖಾಸಗಿ ಕಂಪನಿಗಳು, ಫ್ಯಾಕ್ಟರಿಗಳು ಹಾಗೂ ಕಛೇರಿಗಳು ತಮ್ಮ ತಮ್ಮ ನೌಕರರಿಗೆ ವರ್ಕ್ ಫ್ರಾಂ ಹೋಮ್ ಮಾಡಲು ಸಲಹೆ ನೀಡಿವೆ. ಹೀಗಾಗಿ ದೇಶಾದ್ಯಂತ ಇರುವ ಟೆಲಿಕಾಂ ಕಂಪನಿಗಳ ಹೆಗಲ ಮೇಲೆ ಭಾರಿ ಜವಾಬ್ದಾರಿ ಇದೆ ಎಂದರೆ ತಪ್ಪಾಗಲಾರದು. ಮೊಬೈಲ್ ಹಾಗೂ ಬ್ರಾಡ್ ಬ್ಯಾಂಡ್ ಸೇವೆಯನ್ನು ನಿರಂತರವಾಗಿ ಚಾಲ್ತಿಯಲ್ಲಿಡುವುದು ಈ ಕಂಪನಿಗಳ ಜವಾಬ್ದಾರಿ ಹೆಚ್ಚಿಸಿದೆ. ದಿನದಿಂದ ಹೆಚ್ಚಾಗುತ್ತಿರುವ ಡೇಟಾ ಡಿಮಾಂಡ್ ಪೂರ್ತಿಗೊಳಿಸುವುದು ಈ ಕಂಪನಿಗಳ ಜವಾಬ್ದಾರಿಯಾಗಿ ಪರಿಣಮಿಸಿದೆ. ಇದಕ್ಕಾಗಿ ದೇಶಾದ್ಯಂತ ಇರುವ ಪ್ರಮುಖ ಟೆಲಿಕಾಂ ಕಂಪನಿಗಳು ಕಟಿಬದ್ಧವಾಗಿವೆ.


COMMERCIAL BREAK
SCROLL TO CONTINUE READING

ಈ ಹಿನ್ನೆಲೆ ಹಲವು ಟೆಲಿಕಾಂ ಕಂಪನಿಗಳು ವರ್ಕ್ ಫ್ರಾಮ್ ಹೋಮ್ ಅಂದರೆ ಮನೆಯಿಂದಲೇ ಕಚೇರಿ ಕೆಲಸ ಸೌಕರ್ಯವನ್ನು ನಿರಂತರವಾಗಿ ಜಾರಿಯಲ್ಲಿಡಲು ವಿವಿಧ ರೀತಿಯ ಪ್ಲಾನ್ ಗಳನ್ನು ಬಿಡುಗಡೆಗೊಳಿಸಿವೆ. ಇದಲ್ಲದೆ ಎಲ್ಲ ಕಂಪನಿಗಳು ತಮ್ಮ ತಮ್ಮ ನೆಟ್ವರ್ಕ್ ಅನ್ನು ಮಾನಿಟರ್ ಮಾಡಲಾರಂಭಿಸಿವೆ. ಹಾಗಾದರೆ ಬನ್ನಿ ಕರೋನಾ ವೈರಸ್ ಪ್ರಕೋಪದ ಹಿನ್ನೆಲೆ ದೇಶಾದ್ಯಂತದ ಟೆಲಿಕಾಂ ಕಂಪನಿಗಳು ಯಾವ ಯಾವ ರೀತಿಯ ಕ್ರಮಗಳನ್ನು ಕೈಗೊಂಡಿವೆ ಎಂಬುದನ್ನು ತಿಳಿಯೋಣ.


ತನ್ನ ಬ್ರಾಡ್ಬ್ಯಾಂಡ್ ಗ್ರಾಹಕರಿಗೆ ಉಚಿತ ಸೇವೆ ನೀಡಿದ BSNL
ದೇಶದ ಸಾರ್ವಜನಿಕ ವಲಯದ ಅತಿ ದೊಡ್ಡ ಟೆಲಿಕಾಂ ಕಂಪನಿಯಾಗಿರುವ ಭಾರತ ಸಂಚಾರ್ ನಿಗಮ್ ಲಿಮಿಟೆಡ್ ಅಂದರೆ BSNL, ವರ್ಕ್ ಫ್ರಾಮ್ ಹೋಮ್ ಅಭಿಯಾನಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ Work@Home ಬ್ರಾಡ್ಬ್ಯಾಂಡ್ ಪ್ಲಾನ್ ಲಾಂಚ್ ಮಾಡಿದೆ. ಈ ಪ್ಲಾನ್ ಅಡಿ ದೇಶಾದ್ಯಂತ ಇರುವ BSNL ಲ್ಯಾಂಡ್ ಲೈನ್ ಗ್ರಾಹಕರಿಗೆ ಉಚಿತ ಬ್ರಾಡ್ಬ್ಯಾಂಡ್ ಸೌಕರ್ಯ ಕಲ್ಪಿಸಲಾಗುತ್ತಿದೆ. BSNL ಲ್ಯಾಂಡ್ ಲೈನ್ ಕನೆಕ್ಷನ್ ಇದ್ದು, ಬ್ರಾಡ್ ಬ್ಯಾಂಡ್ ಸೌಕರ್ಯ ಹೊಂದಿರದ ಗ್ರಾಹಕರಿಗೆ ಈ ಸೌಕರ್ಯ ಕಲ್ಪಿಸಲಾಗಿದೆ. ಈ ಪ್ಲಾನ್ ಅಡಿ ಎಲ್ಲ ಗ್ರಾಹಕರಿಗೆ ನಿತ್ಯ 5GB ಡೇಟಾ 10 Mbps ಡೌನ್ಲೋಡ್ ಸ್ಪೀಡ್ ನಲ್ಲಿ ಸಿಗಲಿದೆ. ಒಂದು ವೇಳೆ ಯಾವುದೇ ಗ್ರಾಹಕ ತನ್ನ 5GB ಲಿಮಿಟ್ ದಾಟಿದರೆ, ಡೌನ್ ಲೋಡ್ ಸ್ಪೀಡ್ ಲಿಮಿಟ್ 1 Mbpsಗೆ ಇಳಿಯಲಿದೆ. ಈ ಪ್ಲಾನ್ ಜೊತೆಗೆ ಗ್ರಾಹಕರಿಗೆ ಒಂದು ಉಚಿತ ಇ-ಮೇಲ್ ಐಡಿ ಕೂಡ ಸಿಗಲಿದ್ದು, ಇದರಲ್ಲಿ 1 GB ಸ್ಟೋರೇಜ್ ಸ್ಪೇಸ್ ಸಿಗಲಿದೆ. ಈ ಹೊಸ ಪ್ಲಾನ್ ಗಾಗಿ ಗ್ರಾಹಕರಿಗೆ ಯಾವುದೇ ರೀತಿಯ ಮಾಸಿಕ ಶುಲ್ಕ ನೀಡುವ ಅಗತ್ಯವಿಲ್ಲ ಹಾಗೂ ಯಾವುದೇ ರೀತಿಯ ಸಿಕ್ಯೋರಿಟಿ ಡಿಪಾಸಿಟ್ ನೀಡುವ ಅಗತ್ಯವಿಲ್ಲ.


MTNL ದ್ವಿಗುಣಗೊಳಿಸಿದೆ ಬ್ರಾಡ್ಬ್ಯಾಂಡ್ ಡೇಟಾ
ದಿಲ್ಲಿ ಹಾಗೂ ಮುಂಬೈನಲ್ಲಿ ಕೊರೊನಾ ವೈರಸ್ ಮಹಾಮಾರಿ ಹಿನ್ನೆಲೆ ಲಾಕ್ ಡೌನ್ ಪರಿಸ್ಥಿತಿಯನ್ನು ಪರಿಗಣಿಸಿ ಮಹಾನಗರ ಟೆಲಿಫೋನ್ ನಿಗಮ್ ಲಿಮಿಟೆಡ್ ತನ್ನ ಎಲ್ಲ ಬ್ರಾಡ್ ಬ್ಯಾಂಡ್ ನಲ್ಲಿ ಸಿಗುವ ಡೇಟಾ ಅನ್ನು ದ್ವಿಗುಣಗೊಳಿಸಿದೆ. ಜನರಿಗೆ ವರ್ಕ್ ಫ್ರಾಮ್ ಹೋಮ್ ಸೌಕರ್ಯಕ್ಕೆ ಒತ್ತು ನೀಡುವ ಉದ್ದೇಶದಿಂದ MTNL ತನ್ನ ಎಲ್ಲ ಲ್ಯಾಂಡ್ ಲೈನ್  ಹಾಗೂ ಮೊಬೈಲ್ ಬ್ರಾಡ್ಬ್ಯಾಂಡ್ ಗ್ರಾಹಕರಿಗಾಗಿ ಡೇಟಾ ಅನ್ನು ದ್ವಿಗುಣಗೊಳಿಸಿದೆ. ಗ್ರಾಹಕರಿಗೆ ಒಂದು ತಿಂಗಳ ಅವಧಿಗಾಗಿ ಈ ಸೇವೆ ಸಿಗಲಿದೆ. ಇದರ ಹೊರತಾಗಿ ಒಂದು ವೇಳೆ ಗ್ರಾಹಕರು ಕಾಪರ್ ಆಧಾರಿತ ಬ್ರಾಡ್ ಬಂದ್ ಕನೆಕ್ಷನ್ ಪಡೆದುಕೊಂಡರೆ, ಅಂತಹ ಗ್ರಾಹಕರಿಂದ ಯಾವುದೇ ಇನ್ಸ್ಟಲೆಶನ್ ಚಾರ್ಜ್ ಪಡೆಯಲಾಗುವುದಿಲ್ಲ ಎಂದು ಸಂಸ್ಥೆ ಹೇಳಿದೆ.


ರಿಲಯನ್ಸ್ ಜಿಯೋ ಕೂಡ ತನ್ನ ಪ್ಲಾನ್ ಗಳ ಅಡಿ ದ್ವಿಗುಣ ಡೇಟಾ ನೀಡಲು ನಿರ್ಧರಿಸಿದೆ. ಪ್ಲಾನ್ ಗಳ ವಿವರ ಕೆಳಗಿನಂತಿದೆ.
11 ರೂ. 400 MB ಜಾಗದಲ್ಲಿ 800 MB ಡೇಟಾ ಸಿಗಲಿದೆ.
21 ರೂ. 1 GB ಯಿಂದ 2 GBಗೆ ಹೆಚ್ಚಿಸಿದೆ.
51ರೂ. 3 GB ಯಿಂದ 6 GBಗೆ ಹೆಚ್ಚಿಸಿದೆ.
101ರೂ. 6 GB ಯಿಂದ 12 GBಗೆ ಹೆಚ್ಚಿಸಿದೆ.


ಭಾರತಿ ಏರ್ಟೆಲ್ ಕೂಡ ಹೆಚ್ಚಿನ ಸ್ಪೀಡ್ ಡೇಟಾ ನೀಡುವಲ್ಲಿ ಕಾರ್ಯತತ್ಪರವಾಗಿದೆ ಎಂದು ಕಂಪನಿಯ ತಾಂತ್ರಿಕ ಅಧಿಕಾರಿ ರಣದೀಪ್ ಸೆಕ್ಹೋ ಹೇಳಿದ್ದಾರೆ. ವೊಡಾಫೋನ್-ಐಡಿಯಾ ಕಂಪನಿಗಳೂ ಕೂಡ ಹೆಚ್ಚುತ್ತಿರುವ ಡೇಟಾ ಬೇಡಿಕೆಯನ್ನು ಪೂರೈಸಲು ಸಿದ್ಧವಾಗಿವೆ ಎಂದು ತಿಳಿಸಿವೆ.