ಚೆನ್ನೈ: ಕಾಳಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಅವರ ಕುಟುಂಬ ಆಗಸ್ಟ್‌ 20ರಂದು ತಪ್ಪದೇ ಹಾಜರಾಗುವಂತೆ ವಿಚಾರಣೆಗೆ ಹಾಜರಾಗುವಂತೆ ನಗರದ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ. 


COMMERCIAL BREAK
SCROLL TO CONTINUE READING

ಚಿದಂಬರಂ ಅವರ ಪತ್ನಿ ನಳಿನಿ, ಪುತ್ರ ಕಾರ್ತಿ ಮತ್ತು ಆತನ ಪತ್ನಿ ಶ್ರೀನಿಧಿ ಅವರು ಇಂದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗದ ಕಾರಣ, ಚೀಫ್ ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಎಸ್‌.ಮಲರವಿಜಿ ಅವರು ಆಗಸ್ಟ್‌ 20ರಂದು ತಪ್ಪದೇ ಹಾಜರಾಗಬೇಕೆಂದು ಪಿ.ಚಿದಂಬರಂ ಕುಟುಂಬಕ್ಕೆ ಆದೇಶಿಸಿದ್ದಾರೆ. 


ಅದ್ದಯ ತೆರಿಗೆ ಇಲಾಖೆ ಪ್ರಕಾರ, ಪಿ.ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಅವರು ಯುಕೆ ಯ ಮೆಟ್ರೋ ಬ್ಯಾಂಕಿನಲ್ಲಿರುವ ತಮ್ಮ ಖಾತೆ ವಿವರ ಮತ್ತು ಅಮೇರಿಕಾದ ನ್ಯಾನೋ ಹೋಲ್ಡಿಂಗ್ ಎಲ್ಎಲ್ಸಿಯಲ್ಲಿನ ಬಂಡವಾಳ ಹೂಡಿಕೆ ಬಗ್ಗೆ ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ. ಅಲ್ಲದೆ, ಕಾರ್ತಿ ಮಾಲಿಕತ್ವದ ಚೆಸ್ ಗ್ಲೋಬಲ್ ಕಂಪನಿಯ ಹೂಡಿಕೆಗಳ ಬಗ್ಗೆಯೂ ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ. ಇದು ಕಾಳಧನ ಕಾಯ್ದೆಯಡಿ ಮಹಾ ಅಪರಾಧ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ. 


ಅಲ್ಲದೆ, ಪಿ.ಚಿದಂಬರಂ ಕುಟುಂಬದ ಮೂವರು ಸದಸ್ಯರೂ ಕೇಂಬ್ರಿಡ್ಜ್ ನಲ್ಲಿ ಜಂಟಿಯಾಗಿ ಹೊಂದಿರುವ 5.37 ಕೋಟಿ ರೂ. ಮೌಲ್ಯದ ಆಸ್ತಿ, ಬ್ರಿಟನ್ ಮತ್ತು ಅಮೆರಿಕಾದಲ್ಲಿ ಹೊಂದಿರುವ 3.28 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಇನ್ನೂ ಬಹಿರಂಗಪಡಿಸಿಲ್ಲ ಎಂದು ಇಲಾಖೆ ತಿಳಿಸಿದೆ. 


ಈ ಹಿನ್ನೆಲೆಯಲ್ಲಿ, ಆದಾಯ ತೆರಿಗೆ ಇಲಾಖೆಯು ಕಾಳಧನ ಕಾಯಿದೆಯ ಸೆಕ್ಷನ್ 50ರ ಅಡಿಯಲ್ಲಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದೆ. ಈ ಹಿಂದೆಯೂ ಜೂನ್ 25ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಚಿದಂಬರಂ ಕುಟುಂಬಕ್ಕೆ ನ್ಯಾಯಾಲಯ ಆದೇಶಿಸಿತ್ತು. ಆದರೆ ಅವರು ನ್ಯಾಯಾಲಯಕ್ಕೆ ಹಾಜರಾಗದ ಕಾರಣ ಆಗಸ್ಟ್ 20ರಂದು ತಪ್ಪದೇ ಹಾಜರಾಗುವಂತೆ ನ್ಯಾಯಾಲಯ ಆದೇಶಿಸಿದೆ.