ಮೇವು ಹಗರಣ 4ನೇ ಪ್ರಕರಣ: ಮಾ.16ಕ್ಕೆ ಲಾಲೂ ವಿರುದ್ಧ ತೀರ್ಪು ಕಾಯ್ದಿರಿಸಿದ ನ್ಯಾಯಾಲಯ
ಲಾಲು ಪ್ರಸಾದ್ ಯಾದವ್ ವಿರುದ್ಧ ನಾಲ್ಕನೇ ಮೇವು ಹಗರಣ ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ಸಿಬಿಐ ನ್ಯಾಯಾಲಯ ತೀರ್ಪನ್ನು ನಾಳೆ(ಮಾ.16)ಗೆ ಕಾಯ್ದಿರಿಸಿದೆ.
ರಾಂಚಿ: ರಾಷ್ಟ್ರೀಯ ಜನತಾ ದಳದ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ವಿರುದ್ಧ ನಾಲ್ಕನೇ ಮೇವು ಹಗರಣ ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ಸಿಬಿಐ ನ್ಯಾಯಾಲಯ ತೀರ್ಪನ್ನು ನಾಳೆ(ಮಾ.16)ಗೆ ಕಾಯ್ದಿರಿಸಿದೆ.
"ಎರಡೂ ಪಕ್ಷಗಳು ನ್ಯಾಯಾಲಯದಲ್ಲಿ ವಾದ ಮುಗಿಸಿದ್ದು, ಆದೇಶವನ್ನು ಶುಕ್ರವಾರಕ್ಕೆ ಕಾಯ್ದಿರಿಸಲಾಗಿದೆ. ನಂತರ ಅಂತಿಮ ತೀರ್ಪಿನ ದಿನಾಂಕವನ್ನು ನಿಗದಿಪಡಿಸಲಾಗುವುದು" ಎಂದು ಲಾಲು ಪ್ರಸಾದ್ ಯಾದವ್ ಅವರ ವಕೀಲ ಪ್ರಭಾತ್ ಕುಮಾರ್ ಹೇಳಿದ್ದಾರೆ.
ಮೇವು ಹಗರಣದಲ್ಲಿ ಲಾಲು ವಿರುದ್ಧ ಒಟ್ಟು 6 ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು. ಮೂರು ಪ್ರಕರಣಗಳಲ್ಲಿ ಶಿಕ್ಷೆ ವಿಧಿಸಲಾಗಿದೆ. ಮೇವು ಹಗರಣದ ಮೊದಲ ಪ್ರಕರಣದಲ್ಲಿ ಲಾಲು ಅಪರಾಧಿ ಎಂದು ಸಾಬೀತಾಗಿ 2013 ರಲ್ಲಿ 5 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು. ನಂತರ 2017 ರ ಡಿ. 23 ರಂದು ಮತ್ತೊಂದು ಪ್ರಕರಣದಲ್ಲಿ ಮೂರುವರೆ ವರ್ಷ ಜೈಲು ಶಿಕ್ಷೆ ವಿಧಿಸಲಾಯಿತು. ಜನವರಿ 24 ರಂದು ಮೂರನೇ ಪ್ರಕರಣದಲ್ಲಿ 5 ವರ್ಷಗಳ ಶಿಕ್ಷೆ ವಿಧಿಸಲಾಯಿತು.
ಇದೀಗ ರಾಂಚಿ ಹಾಗೂ ಪಾಟ್ನಾದಲ್ಲಿ ತಲಾ ಒಂದೊಂದು ಪ್ರಕರಣದಲ್ಲಿ ಲಾಲೂ ಆರೋಪ ಎದುರಿಸುತ್ತಿದ್ದಾರೆ. 1990 ರಲ್ಲಿ ಲಾಲೂ ಪ್ರಸಾದ್ ಯಾದವ್ ಬಿಹಾರದ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮೇವು ಹಗರಣ ನಡೆದಿತ್ತು. ಸದ್ಯ ಲಾಲೂ ಪ್ರಸಾದ್ ಯಾದವ್ ಅವರು ಬಿರ್ಸಾ ಮುಂಡಾ ಕೇಂದ್ರಿಯ ಕಾರಾಗೃಹದಲ್ಲಿ ಜೈಲು ವಾಸ ಅನುಭವಿಸುತ್ತಿದ್ದಾರೆ.