ಟ್ರಬಲ್ ಶೂಟರ್ಗೆ ಸದ್ಯಕ್ಕಿಲ್ಲ ರಿಲೀಫ್; ಸೆ.13 ರವರೆಗೆ ಇಡಿ ಕಸ್ಟಡಿಗೆ ಡಿ.ಕೆ.ಶಿವಕುಮಾರ್
ನ್ಯಾಯಾಧೀಶ ಅಜಯ್ ಕುಮಾರ್ ಕುಹಾರ್ ಅವರು, ಡಿ.ಕೆ.ಶಿವಕುಮಾರ್ ಅವರನ್ನು ಸೆಪ್ಟೆಂಬರ್ 13ರ ವರೆಗೆ ಇಡಿ ವಶಕ್ಕೆ ಒಪ್ಪಿಸಿ ಆದೇಶ ಹೊರಡಿಸಿದ್ದಾರೆ.
ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಂಗಳವಾರ ರಾತ್ರಿ ಬಂಧಿತರಾದ ಕಾಂಗ್ರೆಸ್ ನಾಯಕ, ಮಾಜಿ ಸಚಿವ ಹಾಗೂ ಶಾಸಕ ಡಿ.ಕೆ.ಶಿವಕುಮಾರ್ ಅವರನ್ನು ಸೆಪ್ಟೆಂಬರ್ 13ರವರೆಗೆ 10 ದಿನಗಳ ಕಾಲ ಜಾರಿ ನಿರ್ದೇಶನಾಲಯದ ವಶಕ್ಕೆ ನೀಡಿ ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯ ಆದೇಶಿಸಿದೆ.
ಸುದೀರ್ಘ ನಾಲ್ಕು ದಿನಗಳ ವಿಚಾರಣೆ ಬಳಿಕವೂ ಡಿಕೆಶಿ ಸರಿಯಾಗಿ ವಿಚಾರಣೆಗೆ ಸ್ಪಂದಿಸುತ್ತಿಲ್ಲ ಎಂಬ ಕಾರಣ ನೀಡಿ ಇಡಿ ಅಧಿಕಾರಿಗಳು ಮಂಗಳವಾರ ರಾತ್ರಿ ನವದೆಹಲಿಯಲ್ಲಿ ಬಂಧಿಸಿದ್ದು, ರಾತ್ರಿಯಿಡೀ ರಕ್ತದೊತ್ತಡ ಮತ್ತು ಸಕ್ಕರೆ ಖಾಯಿಲೆ ಹೆಚ್ಚಾದ ಕಾರಣ ಆರ್ ಎಂಎಲ್ ಆಸ್ಪತ್ರೆಯಲ್ಲಿ ವಿಶೇಷ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಬುಧವಾರ ಮಧ್ಯಾಹ್ನ ಡಿಕೆಶಿ ಅವರನ್ನು ದೆಹಲಿ ನ್ಯಾಯಾಲಯಕ್ಕೆ ಹಾಜರುಪಡಿಸಿ ವಿಚಾರಣೆಗೆ ಒಳಪಡಿಸಲಾಯಿತು.
ನ್ಯಾಯಾಲಯದಲ್ಲಿ ಜಾರಿ ನಿರ್ದೇಶನಾಲಯದ ಪರವಾಗಿ ವಾದ ಮಂಡಿಸಿದ ವಕೀಲ ನಟರಾಜ್ ಅವರು ಡಿಕೆ ಶಿವಕುಮಾರ್ ಅವರನ್ನು 14 ದಿನಗಳ ಕಾಲ ಇಡಿ ವರ್ಷಕ್ಕೆ ನೀಡಬೇಕೆಂದು ಮನವಿ ಮಾಡಿದ್ದರು. ಆದರೆ, ಡಿಕೆಶಿ ಪರ ವಕೀಲರಾದ ಅಭಿಷೇಕ್ ಮನು ಸಿಂಗ್ವಿ ಅವರು, ಇದಕ್ಕೆ ವಿರೋಧ ವ್ಯಕ್ತಪಡಿಸಿ, ಕಾನೂನು ಬಾಹಿರವಾಗಿ ಡಿಕೆಶಿ ಅವರನ್ನು ಬಂಧಿಸಲಾಗಿದ್ದು, ಕೂಡಲೇ ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು ಎಂದು ವಾದ ಮಂಡಿಸಿದರು.
ಬಳಿಕ ಎರಡೂ ಕಡೆಯ ವಾದ ಪ್ರತಿವಾದಗಳನ್ನು ಆಲಿಸಿದ ನ್ಯಾಯಾಧೀಶ ಅಜಯ್ ಕುಮಾರ್ ಕುಹಾರ್ ಅವರು, ಡಿ.ಕೆ.ಶಿವಕುಮಾರ್ ಅವರನ್ನು ಸೆಪ್ಟೆಂಬರ್ 13ರ ವರೆಗೆ ಇಡಿ ವಶಕ್ಕೆ ಒಪ್ಪಿಸಿ ಆದೇಶ ಹೊರಡಿಸಿದರು. ಅಲ್ಲದೆ, ಸೆ.13ರಂದೇ ಜಾಮೀನು ಅರ್ಜಿಯನ್ನೂ ಸಹ ವಿಚಾರಣೆ ನಡೆಸುವುದಾಗಿ ನ್ಯಾಯಾಲಯ ಹೇಳಿದೆ. ಇಡಿ ವಶದಲ್ಲಿರುವ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಅವರನ್ನು ಅವರ ಕುಟುಂಬಸ್ಥರು ಹಾಗೂ ವಕೀಲರು ಮಾತ್ರ ಭೇಟಿ ಮಾಡಲು ಅನುಮತಿ ನೀಡಲಾಗಿದೆ.