ಕೋಲ್ಕತ್ತಾ: ಫೊನಿ ಚಂಡಮಾರುತ ಇಂದು ಪಶ್ಚಿಮ ಬಂಗಾಳಕ್ಕೆ ಅಪ್ಪಳಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಎರಡು ದಿನಗಳ ಚುನಾವಣಾ ಪ್ರಚಾರವನ್ನು ರದ್ದುಗೊಳಿಸಿದ್ದಾರೆ. 


COMMERCIAL BREAK
SCROLL TO CONTINUE READING

ಸದ್ಯ ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳದ ಕರಾವಳಿ ತೀರ ಪ್ರದೇಶ ಖಾರಗ್ ಪುರದಲ್ಲಿದ್ದು, ಅವರೇ ಖುದ್ಧಾಗಿ ಪರಿಸ್ಥಿತಿಯನ್ನು  ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ, ಜನರು ಆತಂಕಕ್ಕೆ ಒಳಗಾಗದೆ, ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದುಕೊಳ್ಳುವಂತೆ  ಕರೆ ನೀಡಿದ್ದಾರೆ.


"ಜನತೆ ಯಾವುದೇ ವದಂತಿಗಳಿಗೆ ಕಿವಿಗೊಡದೆ, ಆತಂಕಕ್ಕೆ ಒಳಗಾಗದೆ ಶಾಂತವಾಗಿರಿ. ಹತ್ತಿರದ ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದುಕೊಳ್ಳಿ. ಸರ್ಕಾರ ಅಲರ್ಟ್ ಆಗಿದೆ, ಕ್ಷಣಕ್ಷಣದ ಮಾಹಿತಿಯನ್ನು ಪಡೆದು ಮೇಲ್ವಿಚಾರಣೆ ನಡೆಸುತ್ತಿದೆ" ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.  ನಗರದ ಮೇಯರ್ ಫಿರ್ಹಾದ್ ಹಕೀಮ್ ಅವರು ಕೊಲ್ಕತ್ತಾದ ಮುನ್ಸಿಪಲ್ ಹೆಡ್ ಕ್ವಾಟರ್ ನಿಯಂತ್ರಣ ಕೊಠಡಿಯಿಂದ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದಿದ್ದಾರೆ.


"ಪ್ರತಿಯೊಂದು ಜಿಲ್ಲೆಯಲ್ಲೂ ಪರಿಹಾರ ಶಿಬಿರಗಳ ವ್ಯವಸ್ಥೆ ಮಾಡಲಾಗಿದೆ. ಪರಿಹಾರ ಸಾಮಗ್ರಿಗಳನ್ನು ಈಗಾಗಲೇ ಕಳುಹಿಸಲಾಗಿದ್ದು, ರಾಜ್ಯ ಕಾರ್ಯದರ್ಶಿ ಅವರಿಗೆ 24 ಗಂಟೆಗಳ ಮೇಲ್ವಿಚಾರಣೆ ನಡೆಸಲು ಸೂಚಿಸಲಾಗಿದೆ. ತಗ್ಗು ಪ್ರದೇಶಗಳಲ್ಲಿರುವ ಜನರು ಕೂಡಲೇ ಸುರಕ್ಷಿತ ಸ್ಥಳಗಳಿಗೆ ಹೋಗಿ ನೆಲೆಸಿ" ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.