ಫೋನಿ ಚಂಡಮಾರುತ: ಒಡಿಶಾದಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ ಪ್ರಧಾನಿ ಮೋದಿ, ಹೆಚ್ಚುವರಿ 1,000 ಕೋಟಿ ರೂ. ಬಿಡುಗಡೆ
ಇಂದು ಬೆಳಗ್ಗೆ ಬಿಜು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮೋದಿ, ಚಂಡಮಾರುತಪೀಡಿತ ಪ್ರದೇಶಗಳಾದ ಪುರಿ, ಖುರ್ದಾ, ಕಟಕ್, ಜಗತ್ಸಿಂಗ್ಪುರ್, ಜಾಜ್ಪುರ್, ಕೇಂದ್ರಪಾರಾ, ಭದ್ರಾಕ್ ಹಾಗೂ ಬಾಲಾಸೋರ್ನಲ್ಲಿ ಜಿಲ್ಲೆಗಳ ಸಮೀಕ್ಷೆ ನಡೆಸಿದರು.
ಭುವನೇಶ್ವರ: ಪ್ರಧಾನಿ ನರೇಂದ್ರ ಮೋದಿ ಅವರು ಒಡಿಶಾದಲ್ಲಿ ಫೋನಿ ಚಂಡಮಾರುತದಿಂದ ಹಾನಿಗೊಳಗಾಗಿರುವ ಪ್ರದೇಶಗಳನ್ನು ಸೋಮವಾರ ವೈಮಾನಿಕ ಸಮಿಕ್ಷೆ ನಡೆಸಿದರು.
ಇಂದು ಬೆಳಗ್ಗೆ ಬಿಜು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮೋದಿ, ಚಂಡಮಾರುತಪೀಡಿತ ಪ್ರದೇಶಗಳಾದ ಪುರಿ, ಖುರ್ದಾ, ಕಟಕ್, ಜಗತ್ಸಿಂಗ್ಪುರ್, ಜಾಜ್ಪುರ್, ಕೇಂದ್ರಪಾರಾ, ಭದ್ರಾಕ್ ಹಾಗೂ ಬಾಲಾಸೋರ್ನಲ್ಲಿ ಜಿಲ್ಲೆಗಳ ಸಮೀಕ್ಷೆ ನಡೆಸಿದರು. ಈ ಸಂದರ್ಭದಲ್ಲಿ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ರಾಜ್ಯಪಾಲ ಗಣೇಶಿ ಲಾಲ್ ಪ್ರಧಾನಿಗೆ ಸಾಥ್ ನೀಡಿದರು.
ವೈಮಾನಿಕ ಸಮೀಕ್ಷೆ ಬಳಿಕ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಪ್ರಧಾನಿ ಮೋದಿ, ಪರಿಹಾರ ಹಾಗೂ ಪುನರ್ನಿರ್ಮಾಣ ಕಾರ್ಯಗಳ ಬಗ್ಗೆ ಚರ್ಚಿಸಿದರು.
ಬಳಿಕ ಸುದ್ದಿಸಂಸ್ಥೆ ಎಎನ್ಐ ಜೊತೆ ಮಾತನಾಡಿದ ಅವರು, ರಾಜ್ಯ ಹಾಗೂ ಕೇಂದ್ರ ಸರ್ಕಾರದ ನಡುವೆ ಉತ್ತಮ ರೀತಿಯಲ್ಲಿ ಸಂವನಹನ ನಡೆದಿದೆ. ಕೇಂದ್ರದ ಪ್ರತಿಯೊಂದು ಸೂಚನೆಯನ್ನೂ ಒಡಿಶಾ ಜನತೆ ಅನುಸರಿಸುತ್ತಿದ್ದ ರೀತಿ ನಿಜಕ್ಕೂ ಪ್ರಶಂಸನೀಯ. ಈಗಾಗಲೇ ಪರಿಹಾರ ಕಾರ್ಯಗಳಿಗಾಗಿ ಕೇಂದ್ರ ಸರ್ಕಾರ 381 ಕೋಟಿ ರೂ.ಗಳನ್ನೂ ಬಿಡುಗಡೆ ಮಾಡಿದೆ. ಇದೀಗ ಹೆಚ್ಚುವರಿಯಾಗಿ 1,000 ಕೋಟಿ ರೂ. ಬಿಡುಗಡೆ ಮಾಡಲಾಗುವುದು ಎಂದು ಮೋದಿ ಹೇಳಿದರು.
ಮೇ 3ರಂದು ಒಡಿಶಾ ರಾಜ್ಯದ ಕರಾವಳಿ ಭಾಗಗಳಿಗೆ ಅಪ್ಪಳಿಸಿದ್ದ ಫೋನಿ ಚಂಡಮಾರುತಕ್ಕೆ 30ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ.