ಉತ್ತರ ಪ್ರದೇಶದ ಮೌದಲ್ಲಿ ಸಿಲಿಂಡರ್ ಸ್ಫೋಟ; 7 ಮೃತ, ಡಜನ್‌ಗೂ ಹೆಚ್ಚು ಮಂದಿಗೆ ಗಾಯ
ಗಾಯಗೊಂಡ ಎಲ್ಲರನ್ನು ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು ಎಂದು ಪೊಲೀಸರು ಆತಂಕ ವ್ಯಕ್ತಪಡಿಸಿದ್ದಾರೆ.
ನವದೆಹಲಿ: ಉತ್ತರ ಪ್ರದೇಶದ ಮೌದಲ್ಲಿ ಮನೆಯೊಂದರಲ್ಲಿ ಸಿಲಿಂಡರ್ ಸ್ಫೋಟಗೊಂಡು ಎರಡು ಅಂತಸ್ತಿನ ಕಟ್ಟಡ ಕುಸಿದು ಕನಿಷ್ಠ ಏಳು ಜನರು ಸಾವನ್ನಪ್ಪಿದ್ದಾರೆ ಮತ್ತು ಒಂದು ಡಜನ್‌ಗೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಮೊಹಮ್ಮದಾಬಾದ್‌ನಲ್ಲಿ ಸೋಮವಾರ ಬೆಳಿಗ್ಗೆ 7.30 ರ ಸುಮಾರಿಗೆ ಈ ಘಟನೆ ನಡೆದಿದೆ.
ವರದಿಯ ಪ್ರಕಾರ, ಸ್ಫೋಟದಲ್ಲಿ ಕನಿಷ್ಠ 15 ಜನರು ಗಾಯಗೊಂಡಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ಪೊಲೀಸ್ ಮತ್ತು ಅಗ್ನಿಶಾಮಕ ದಳದ ತಂಡವೊಂದು ಪ್ರಸ್ತುತ ರಕ್ಷಣಾ ಕಾರ್ಯಗಳನ್ನು ನಿರ್ವಹಿಸುತ್ತಿದೆ.
ಏತನ್ಮಧ್ಯೆ, ಗಾಯಗೊಂಡ ಎಲ್ಲರನ್ನು ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು ಎಂದು ಪೊಲೀಸರು ಆತಂಕ ವ್ಯಕ್ತಪಡಿಸಿದ್ದಾರೆ.
ಸ್ಥಳೀಯರ ಪ್ರಕಾರ, ಸಿಲಿಂಡರ್ ಸ್ಫೋಟದ ನಂತರ, ಬೆಂಕಿಯು ಕೆನ್ನಾಲಿಗೆ ಮನೆಯನ್ನು ಆವರಿಸಿ, ಕಟ್ಟಡ ಕುಸಿದಿದೆ. ಜೆಸಿಬಿ ಯಂತ್ರದ ಸಹಾಯದಿಂದ ಅವಶೇಷಗಳಡಿ ಸಿಲುಕಿರುವವರನ್ನು ರಕ್ಷಿಸಲು ರಕ್ಷಣಾ ತಂಡ ಹರಸಾಹಸ ಪಡುತ್ತಿದೆ.
ಈ ಘಟನೆಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂತಾಪ ಸೂಚಿಸಿದ್ದು, ಪರಿಹಾರ ಮತ್ತು ರಕ್ಷಣಾ ಕಾರ್ಯಗಳನ್ನು ಚುರುಕುಗೊಳಿಸುವಂತೆ ಜಿಲ್ಲಾಧಿಕಾರಿ ಮತ್ತು ಎಸ್‌ಎಸ್‌ಪಿಗೆ ನಿರ್ದೇಶನ ನೀಡಿದರು. ಘಟನೆಯಲ್ಲಿ ಗಾಯಗೊಂಡವರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸಬೇಕು ಎಂದು ಸಿಎಂ ಅಧಿಕಾರಿಗಳಿಗೆ ಸೂಚಿಸಿದ್ದಾರೆ.