ಚಿತ್ರದುರ್ಗ: ಚಿತ್ರದುರ್ಗದ ಬಿಜೆಪಿ ಸಂಸದ ಎ.ನಾರಾಯಣಸ್ವಾಮಿ ಅವರನ್ನು ದಲಿತ ಎಂಬ ಕಾರಣಕ್ಕೆ ಗ್ರಾಮಕ್ಕೆ ಪ್ರವೇಶಿಸದಂತೆ ತಡೆದ ಘಟನೆ ತುಮಕೂರು ಜಿಲ್ಲೆಯ ಪಾವಗಡದ ಗ್ರಾಮವೊಂದರಲ್ಲಿ ನಡೆದಿದೆ. 


COMMERCIAL BREAK
SCROLL TO CONTINUE READING

ಸೋಮವಾರ ಸಂಜೆ ನಾರಾಯಣಸ್ವಾಮಿ ಅವರು ಸಿಎಸ್​ಆರ್ ಅಡಿಯಲ್ಲಿ ಬಯೋಕಾನ್ ಸಂಸ್ಥೆ ಹಾಗೂ ನಾರಾಯಣ ಹೃದಯಾಲಯದ ಪ್ರತಿನಿಧಿಗಳು ಮತ್ತು ಅಧಿಕಾರಿಗಳ ತಂಡದೊಂದಿಗೆ ಪಾವಗಡದ  ಗೊಲ್ಲರಹಟ್ಟಿ ಗ್ರಾಮದಲ್ಲಿ ನಿರ್ವಸತಿಗರಿಗೆ ಮನೆ ನಿರ್ಮಾಣ ಮಾಡುವ ಸಂಬಂಧ ಭೇಟಿ ನೀಡಿದಾಗ ಅಲ್ಲಿನ ಗ್ರಾಮಸ್ಥರು ಗ್ರಾಮಕ್ಕೆ ಪ್ರವೇಶಿಸಲು ಅವಕಾಶ ನೀಡದೆ ನಿರ್ಬಂಧ ಹೇರಿದ ಘಟನೆ ನಡೆದಿದೆ. 


ಸಂಸದ ಎ.ನಾರಾಯಣಸ್ವಾಮಿ ಅವರು ದಲಿತ ಎಂಬ ಕಾರಣಕ್ಕೆ ಗ್ರಾಮಸ್ಥರು ಗ್ರಾಮಕ್ಕೆ ಪ್ರವೇಶಿಸಲು ನಿರ್ಬಂಧಿಸಿದ್ದು, ಯಾವುದೇ ಕೆಳಜಾತಿಯವರಿಗೆ ಗ್ರಾಮಕ್ಕೆ ಪ್ರವೇಶಿಸಲು ಅನುಮತಿ ನೀಡುವುದಿಲ್ಲ ಎಂದಿದ್ದಾರೆ. ಈ ಸಂದರ್ಭದಲ್ಲಿ ಅಲ್ಲಿದ್ದ ಪ್ರತಿನಿಧಿಗಳ ತಂಡದವರು ಗ್ರಾಮಸ್ಥರ ಮನವೊಲಿಸಲು ಎಷ್ಟೇ ಪ್ರಯತ್ನಿಸಿದರಾದರೂ ಅದು ಫಲಿಸಲಿಲ್ಲ.



ಬಳಿಕ ಸಂಸದ ನಾರಾಯಣಸ್ವಾಮಿ ಅವರು ಅಲ್ಲಿಂದ ಕಾರಿನಲ್ಲಿ ತೆರಳಿದ್ದು, ಘಟನೆ ಬಗ್ಗೆ ಪೊಲೀಸ್ ತನಿಖೆಗೆ ಆದೇಶಿಸಿದ್ದಾರೆ.


ಈ ಬಗ್ಗೆ ಪ್ರತಿಕ್ರಿಯಿಸಿರುವ ಎಸ್ಪಿ, "ಬಿಜೆಪಿ ಸಂಸದರು ಪ್ರವೇಶಿಸುವುದನ್ನು ಯಾರು ತಡೆದರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಬಗ್ಗೆ ವಿಚಾರಣೆ ನಡೆಸಿ ವರದಿ ಸಲ್ಲಿಸಲು ಇನ್ಸ್‌ಪೆಕ್ಟರ್‌ಗೆ ಆದೇಶಿಸಿದ್ದೇನೆ" ಎಂದು ಹೇಳಿದ್ದಾರೆ.