ಐಐಟಿ ಕಾನ್ಪುರ್ ದಲ್ಲಿ ದಲಿತ ವಿದ್ಯಾರ್ಥಿಯ ಆತ್ಮಹತ್ಯೆ
ಕಾನ್ಪುರ್: ಐಐಟಿ ಕಾನ್ಪುರ್ ನ ಮೂರನೇ ವರ್ಷದ ಪಿಎಚ್ಡಿ ವಿದ್ಯಾರ್ಥಿ ಸೀಲಿಂಗ್ ಫ್ಯಾನ್ನಿಂದ ತನ್ನ ಹಾಸ್ಟೆಲ್ ಕೋಣೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿದ್ಯಾರ್ಥಿಯನ್ನು ಭೀಮ್ ಸಿಂಗ್ ಎಂದು ಗುರುತಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧೀಕ್ಷಕ ಅಖಿಲೇಶ್ ಕುಮಾರ್ ತಿಳಿಸಿದ್ದಾರೆ.
ಇದುವರೆಗೂ ಆತ್ಮಹತ್ಯೆಗೆ ಕಾರಣವೆಂದರೆ ಸ್ಪಷ್ಟವಾಗಿಲ್ಲ, ಆದರೆ ವಿದ್ಯಾರ್ಥಿಯ ಕೊಠಡಿಯಲ್ಲಿ ತುಂಡಾಗಿ ಹರಿದಿರುವ ಪತ್ರವೊಂದು ಕಂಡುಬಂದಿದೆ.ಇದಕ್ಕೆ ಪ್ರತಿಕ್ರಿಯಿಸಿರುವ ಐಐಟಿ-ಕಾನ್ಪುರ ಉಪ ನಿರ್ದೇಶಕ ಮಣಿಂದ್ರ ಅಗರ್ವಾಲ್ ಅವರು, ಪತ್ರವನ್ನು ನ್ಯಾಯ ವಿಧಿ ವಿಜ್ಞಾನ ವಿಭಾಗಕ್ಕೆ ತಲುಪಿಸಲಾಗಿದೆ ಎಂದರು.
ವಿಧ್ಯಾರ್ಥಿಯು ಒಂದು ದಿನದಿಂದ ಕಾಣದೆ ಇರುವುದನ್ನು ಗಮನಿಸಿದ ಹಲವು ವಿಧ್ಯಾರ್ಥಿಗಳು ಲಾಕ್ ಆಗಿರುವ ಕೊಠಡಿಯನ್ನು ಗಮನಿಸಿ ನಂತರ ಯಾವುದೇ ಪ್ರತಿಕ್ರಿಯೆ ಬರದೆ ಇರುವುದನ್ನು ಕಂಡು ಬಾಗಿಲು ಮುರಿದಿದ್ದಾರೆ. ಅನಂತರ ದೇಹವನ್ನು ಪ್ರಾಥಮಿಕ ತನಿಖೆಗಾಗಿ ಪೊಲೀಸರಿಗೆ ಒಪ್ಪಿಸಲಾಗಿದೆ.
ದೆಹಲಿಯ ಬಳಿ ಫರಿದಾಬಾದ್ ನಲ್ಲಿ ವಾಸವಾಗಿರುವ ಅವರ ಪೋಷಕರಿಗೆ ಈ ಆತ್ಮಹತ್ಯೆಯ ವಿಷಯವನ್ನು ತಿಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆತ್ಮಹತ್ಯೆ ಮಾಡಿಕೊಂಡಿರುವ ಸಿಂಗ್ ಅವರು ವಾರಂಗಲ್ ನ ಎನ್ಐಟಿಯಿಂದ ಬಿ.ಟೆಕ್ ಪದವಿ ಪೂರ್ಣಗೊಳಿಸಿದ್ದು, 2015 ರಲ್ಲಿ ಐಐಟಿ-ಕಾನ್ಪುರದ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಅಧ್ಯಯನ ಮಾಡುತ್ತಿದ್ದಾರೆ. 2016 ರಲ್ಲಿ ಹೈದರಾಬಾದ್ ವಿವಿಯಲ್ಲಿ ದಲಿತ ವಿದ್ಯಾರ್ಥಿ ರೋಹಿತ್ ವೆಮುಲಾನ ಆತ್ಮಹತ್ಯೆ ಪ್ರಕರಣ ಇಡೀ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು.