ನವದೆಹಲಿ: ಭಾರತದ ಮೊದಲ ಸೆಮಿ ಅತಿ ವೇಗದ ರೈಲು ಎಂಬ ಖ್ಯಾತಿಗೆ ಪಾತ್ರವಾಗಿರುವ 'ವಂದೇ ಭಾರತ್' ಎಕ್ಸ್‌ಪ್ರೆಸ್ ರೈಲಿನಲ್ಲಿ ಉದ್ಘಾಟನೆಗೊಂಡ ಮರುದಿನವೇ ತಾಂತ್ರಿಕ ದೋಷ ಕಂಡುಬಂದಿದೆ. ಎಂಜಿನ್​ ರಹಿತವಾಗಿರುವ ವಂದೇ ಭಾರತ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ನವದೆಹಲಿಯ ರೈಲ್ವೆ ನಿಲ್ದಾಣದಲ್ಲಿ ಚಾಲನೆ ನೀಡಿದ್ದರು. ಅಲ್ಲಿಂದ ವಾರಾಣಸಿಗೆ ತೆರಳಿದ್ದ ವಂದೇ ಭಾರತ್​, ಶನಿವಾರ ಬೆಳಿಗ್ಗೆ ವಾರಣಾಸಿಯಿಂದ ದೆಹಲಿಗೆ ಮರಳುವ ವೇಳೆ ಮಾರ್ಗ ಮಧ್ಯೆ ಕೆಟ್ಟು ನಿಂತಿದೆ. 


COMMERCIAL BREAK
SCROLL TO CONTINUE READING

ಉತ್ತರ ಪ್ರದೇಶದ ವಾರಣಾಸಿಯಿಂದ 18 ಕಿ.ಮೀ. ದೂರದಲ್ಲಿರುವ ತುಡ್ಲಾ ಜಂಕ್ಷನ್ ಬಳಿ ಈ ಘಟನೆ ನಡೆದಿದೆ. ರೈಲು ಹಳಿಯಲ್ಲಿ ಹಸುಗಳು ಓಡಾಡುತ್ತಿದ್ದಾಗ ಚಕ್ರ ಜಾರಿ ಈ ಘಟನೆ ನಡೆದಿದೆ. 


ತಾಂತ್ರಿಕ ಕಾರಣದಿಂದ ರೈಲಿನ ಮೇಲಿನ ನಿಯಂತ್ರಣಗಳು ವೈಫಲ್ಯ ಕಂಡಿದ್ದು, ಸದ್ಯ ಸರಿಪಡಿಸಲಾಗದ ಸ್ಥಿತಿಯಲ್ಲಿದೆ ಎಂದು ರೈಲಿನ ಎಂಜಿನಿಯರ್​ಗಳು ಮಾಹಿತಿ ನೀಡಿದ್ದರು. ತಾಂತ್ರಿಕ ದೋಷ ಸರಿಪಡಿಸಿದ ಬಳಿಕ ಬೆಳಿಗ್ಗೆ 8.15ರ ಸುಮಾರಿಗೆ ರೈಲು ದೆಹಲಿಗೆ ಹೊರಟಿದೆ ಎಂದು ರೈಲ್ವೆ ಸಚಿವಾಲಯದ ಹೇಳಿಕೆ ತಿಳಿಸಿದೆ


ಇದು ಪ್ರಾಯೋಗಿಕ ಸಂಚಾರವಾಗಿದ್ದು, ಸಮಸ್ಯೆ ಸರಿಪಡಿಸಿದ ನಂತರ ಫೆ. 17ರಿಂದ ವಾಣಿಜ್ಯ ಸಂಚಾರ ನಡೆಸಲಿದೆ ಸಿಪಿಆರ್ ದೀಪಕ್ ಕುಮಾರ್ ತಿಳಿಸಿದ್ದಾರೆ.