ಭುವನೇಶ್ವರ: ಇನ್ನೇನು ಅಂತ್ಯಕ್ರಿಯೆ ನಡೆಸಬೇಕು ಎನ್ನುವಷ್ಟರಲ್ಲಿ ಸತ್ತ ಎಂದು ಚಿತೆಯ ಮಲಗಿಸಿದ್ದ ವ್ಯಕ್ತಿ ಎದ್ದು ಕುಳಿತ ವಿಚಿತ್ರ ಘಟನೆ ಒಡಿಶಾದ ಗಂಜಾಂ ಜಿಲ್ಲೆಯ ಸೋರ್ಡಾ ಬ್ಲಾಕ್‌ನಲ್ಲಿ ನಡೆದಿದೆ.


COMMERCIAL BREAK
SCROLL TO CONTINUE READING

ಎಂದಿನಂತೆ ಕುರಿ ಮೇಯಿಸಲು ಹೋಗಿದ್ದ 60 ವರ್ಷ ವಯಸ್ಸಿನ ವ್ಯಕ್ತಿಯೋರ್ವ ದಾರಿ ಮಧ್ಯೆ ಮೂರ್ಚೆಹೋದ ಘಟನೆ ನಡೆದಿತ್ತು. ಕೂಡಲೇ ಸ್ಥಳಕ್ಕೆ ಆಗಮಿಸಿದ ಕುಟುಂಬದವರು ಆತನ ಉಸಿರಾಟ ಮತ್ತು ನಾಡಿಮಿಡಿತವನ್ನು ಪರಿಶೀಲಿಸಿ ಸತ್ತನೆಂದು ಪರಿಗಣಿಸಿ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಿದ್ದರು. 


ಆದರೆ, ಇನ್ನೇನು ಚಿತೆಗೆ ಬೆಂಕಿ ಹಚ್ಚಬೇಕು ಎನ್ನುವಷ್ಟರಲ್ಲೇ ಆತ ಇದ್ದಕ್ಕಿದ್ದಂತೆ ಎದ್ದು ಕುಳಿತದ್ದನ್ನು ಕಂಡು ಅಲ್ಲಿದ್ದ ಜನ ಭಯಭೀತರಾಗಿ ಒಂದು ಕ್ಷಣ ನಡುಗಿದ್ದರು. ಬಳಿಕ ಸ್ವಲ್ಪ ಸುಧಾರಿಸಿಕೊಂಡು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿ, ಆರೋಗ್ಯವಾಗಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. 


ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿದ ಆ ವ್ಯಕ್ತಿ, "ಕುರಿ ಮೇಯಿಸಲು ತೆರಳಿದ ಬಳಿಕ 2 ಗಂಟೆಗಳ ಕಾಲ ಕುರಿಗಳನ್ನು ಮೇಯಿಸಿದೆ. ಬಳಿಕ ಸ್ವಲ್ಪ ಜ್ವರ ಬಂದಂತೆ ಭಾಸವಾಯಿತು. ಹಾಗಾಗಿ ಅಲ್ಲೇ ನಿದ್ರೆಗೆ ಜಾರಿದೆ. ರಾತ್ರಿಯಿಡೀ ಅಲ್ಲೇ ಮಲಗಿದ್ದೆ. ಆದರೆ ನನಗೆ ಎಚ್ಚರವಾದಾಗ ಚಿತಾಗಾರದಲ್ಲಿ ಮಲಗಿದ್ದೆ. ಒಂದು ಕ್ಷಣ ಉಸಿರೇ ನಿಂತಂತಾಯಿತು" ಎಂದು ಹೇಳಿಕೊಂಡಿದ್ದಾರೆ.