ಮಹಾರಾಷ್ಟ್ರ: ರತ್ನಗಿರಿಯ ತೇವಾರಿ ಅಣೆಕಟ್ಟೆ ಒಡೆದು 23 ಸಾವು, ಇನ್ನೂ ಹಲವರು ಕಣ್ಮರೆ
ಮಂಗಳವಾರ ತಡರಾತ್ರಿ ತೇವಾರಿ ಅಣೆಕಟ್ಟು ಒಡೆದ ಪರಿಣಾಮ ಕೆಳಗಿರುವ ಏಳು ಹಳ್ಳಿಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ.
ಭಾರೀ ಮಳೆಯಿಂದಾಗಿ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ತೇವಾರಿ ಅಣೆಕಟ್ಟು ಮಂಗಳವಾರ ತಡರಾತ್ರಿ ಒಡೆದ ಪರಿಣಾಮ ಸಾವಿನ ಸಂಖ್ಯೆ 23ಕ್ಕೆ ಏರಿಕೆಯಾಗಿದೆ. ಅಲ್ಲದೆ ಇನ್ನೂ ಹಲವರು ಕಣ್ಮರೆಯಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೇ ಎನ್ನಲಾಗಿದೆ.
ಮಂಗಳವಾರ ತಡರಾತ್ರಿ ಅಣೆಕಟ್ಟೆ ಒಡೆದಿದ್ದು, ತಗ್ಗು ಪ್ರದೇಶದ ಗ್ರಾಮಗಳಾದ ಅಕ್ಲೆ, ರಿಕ್ಟೋಲಿ, ಒವಲಿ, ಕಲ್ಕಾವ್ನೆ ಮತ್ತು ನಂದಿವಾಸೆಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. 12 ಮನೆ, 20 ವಾಹನಗಳು ನೀರಿನಲ್ಲಿ ಕೊಚ್ಚಿ ಹೋಗಿವೆ ಎಂದು ಎನ್ಡಿಆರ್ಎಫ್ ಅಧಿಕಾರಿಗಳು ತಿಳಿಸಿದ್ದಾರೆ.
ಕಣ್ಮರೆಯಾದವರಿಗಾಗಿ ರಕ್ಷಣಾ ಕಾರ್ಯ ಭರದಿಂದ ಸಾಗಿದ್ದು, ಹೆಚ್ಚುವರಿ ರಕ್ಷಣಾ ಪಡೆಗಳು, ಸರ್ಕಾರಿ ಅಧಿಕಾರಿಗಳು, ಪೊಲೀಸ್ ಮತ್ತು ಸಾಮಾಜಿಕ ಕಾರ್ಯಕರ್ತರೂ ಭಾಗಿಯಾಗಿದ್ದಾರೆ. ಇದಕ್ಕಾಗಿ ಡ್ರೋನ್ಗಳನ್ನೂ ಸಹ ಬಳಸಿಕೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಹಾರಾಷ್ಟ್ರ ರಾಜ್ಯದಲ್ಲಿ ಈಗಾಗಲೇ ಭಾರಿ ಮಳೆಯಾಗಿದ್ದು ಕನಿಷ್ಠ 37 ಜೀವಗಳು ಬಲಿಯಾಗಿವೆ. ಗೋಡೆಗಳು ಕುಸಿದ ಎರಡು ಪ್ರತ್ಯೇಕ ಘಟನೆಗಳು ಪುಣೆಯಿಂದ ವರದಿಯಾಗಿವೆ. ಮುಂಬೈನ ಮಲಾಡ್‌ನಲ್ಲಿ ಕೂಡ ಗೋಡೆ ಕುಸಿದ ಪರಿಣಾಮ ಹಲವರು ಸಾವನ್ನಪ್ಪಿದ್ದರು.