ತಿರುವನಂತಪುರಂ: ಕೇರಳದಲ್ಲೀಗ ಪ್ರವಾಹದ ಭೀತಿ. ಬೀಳುತ್ತಿರುವ ಧಾರಾಕಾರ ಮಳೆಗೆ ಕೇರಳ ತತ್ತರಿಸಿದ್ದು, ಇದುವರೆಗೆ ಸುಮಾರು 26 ಜನರು ಪ್ರವಾಹದಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೇ ಎನ್ನಲಾಗಿದೆ. ಇಡುಕ್ಕಿ ಜಿಲ್ಲೆಯೊಂದರಲ್ಲೇ ಅತೀ ಹೆಚ್ಚು ಅಂದರೆ ಕಳೆದೆರಡು ದಿನಗಳಲ್ಲಿ 128.6 ಮಿಮಿ ಮತ್ತು 124 ಮಿಮೀ ಮಳೆಯಾಗಿದ್ದು, ತೋಡುಪುಳಾ ಮತ್ತು ಮುನ್ನಾರ್ ನಲ್ಲಿ 107.3 ಮತ್ತು 54.2 ಮಿ.ಮೀ ಮಳೆಯಾಗಿದೆ. ಪರಿಣಾಮ ಕೇರಳದ ಬಹುತೇಕ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಕೇರಳದಲ್ಲಿ ಅಕ್ಷರಶಃ ಪ್ರವಾಹ ಪರಿಸ್ಥಿತಿ ತಲೆದೋರಿದೆ. 




COMMERCIAL BREAK
SCROLL TO CONTINUE READING

ಇಡುಕ್ಕಿ ಅಣೆಕಟ್ಟನ್ನು ಮೇಲ್ವಿಚಾರಣೆ ಮಾಡುವ ಕೇರಳ ರಾಜ್ಯ ವಿದ್ಯುತ್ ಮಂಡಳಿ (ಕೆಎಸ್ಇಬಿ) ರೆಡ್ ಅಲರ್ಟ್ ನೀಡಿದ್ದು, ನದಿ ತೀರಗಳಿಗೆ ಹೋಗದಂತೆ ಜನರಿಗೆ ಸೂಚಿಸಲಾಗಿದೆ. ಶುಕ್ರವಾರ ಬೆಳಿಗ್ಗೆ ಆರು ಗಂಟೆಗೆ ಜಲಾಶಯದ ಬಾಗಿಲುಗಳನ್ನು ತೆರೆದಿದ್ದು, ಈ ಪ್ರದೇಶಗಳಲ್ಲಿ ವಾಸಿಸುವ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗುತ್ತಿದೆ.


ಕೇರಳದ ಹವಾಮಾನ ಇಲಾಖೆ ಶುಕ್ರವಾರವೂ ರಾಜ್ಯದಲ್ಲಿ ಭಾರೀ ಮಳೆಯಾಗುವ ಬಗ್ಗೆ ಎಚ್ಚರಿಕೆ ನೀಡಿದ್ದು, ರಾಜ್ಯದ ಪರಿಸ್ಥಿತಿ ಇನ್ನೂ ಉಲ್ಬಣಗೊಳ್ಳಬಹುದು ಎನ್ನಲಾಗಿದೆ. ಇನ್ನು ಭಾರಿ ಮಳೆ ತತ್ತರಿಸಿರುವ ಕೇರಳದ ವಿವಿಧ ಜಿಲ್ಲೆಗಳ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದ್ದು, ಕಲ್ಲಿಕೋಟೆ, ವಯನಾಡ್, ಪಾಲಕ್ಕಾಡ್, ಇಡುಕ್ಕಿ, ಮಲಪ್ಪುರಂ ಮತ್ತು ಕೊಲ್ಲಂ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. 


ಕೇರಳದ ಕಣ್ಣೂರಿನಲ್ಲಿ ಗುರುವಾರ ಸಂಭವಿಸಿದ ಭೂಕುಸಿತದಲ್ಲಿ ಎರಡು ಮನೆಗಳು ನೆಲಸಮವಾಗುತ್ತಿರುವ ದೃಶ್ಯವನ್ನು ಸುದ್ದಿ ಸಂಸ್ಥೆ ಎಎನ್ಐ ಟ್ವೀಟ್ ಮಾಡಿದೆ.