ಕೇರಳದಲ್ಲಿ ಪ್ರವಾಹ; ಸಾವಿನ ಸಂಖ್ಯೆ 95 ಕ್ಕೆ ಏರಿಕೆ, 59 ಮಂದಿ ಕಣ್ಮರೆ
ಕಾಣೆಯಾದವರಿಗಾಗಿ ಹುಡುಕಾಟ ಕಾರ್ಯ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಿರುವನಂತಪುರಂ (ಕೇರಳ): ಕೇರಳದ ವಿವಿಧ ಜಿಲ್ಲೆಳಲ್ಲಿ ಆಗಸ್ಟ್ 8 ರಿಂದ ಸುರಿಯುತ್ತಿರುವ ಧಾರಾಕಾರ ಮಳೆ ಮತ್ತು ಪ್ರವಾಹಕ್ಕೆ ಸಂಬಂಧಿಸಿದ ಘಟನೆಗಳಲ್ಲಿ ಕನಿಷ್ಠ 95 ಜನರು ಸಾವನ್ನಪ್ಪಿದ್ದಾರೆ ಮತ್ತು 34 ಮಂದಿ ಗಾಯಗೊಂಡಿದ್ದಾರೆ.
ಇತರ ಐವತ್ತೊಂಬತ್ತು ಮಂದಿ ಕಾಣೆಯಾಗಿದ್ದು, ಅವರನ್ನು ಪತ್ತೆ ಹಚ್ಚುವ ಪ್ರಯತ್ನಗಳು ನಡೆಯುತ್ತಿವೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ರಾಜ್ಯದಾದ್ಯಂತ ಹಲವು ಜಿಲ್ಲೆಗಳು ಹಾನಿಗೊಳಗಾಗಿದ್ದು, ಹಲವೆಡೆ ಭೂಕುಸಿತಗಳಿಗೆ ಕಾರಣವಾಗಿದೆ. ಮಲಪ್ಪುರಂನಲ್ಲಿ ಅತಿ ಹೆಚ್ಚು ಹಾನಿಯಾಗಿದ್ದು, ಈ ಜಿಲ್ಲೆಯೊಂದರಲ್ಲೇ 31 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಪ್ರಸ್ತುತ ರಾಜ್ಯದಲ್ಲಿ 1,239 ಪರಿಹಾರ ಶಿಬಿರಗಳು ಕಾರ್ಯನಿರ್ವಹಿಸುತ್ತಿವೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಲವಾರು ನಗರಗಳಿಗೆ ಭೇಟಿ ನೀಡಿ ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಿದ್ದಾರೆ.
ಭಾರತ ಹವಾಮಾನ ಇಲಾಖೆ (ಐಎಂಡಿ) ಮಂಗಳವಾರ ಮುಂದಿನ ಐದು ದಿನಗಳವರೆಗೆ "ಕೆಲವೆಡೆ ಭಾರೀ ಮಳೆಯಾಗಲಿದ್ದು, ಇನ್ನೂ ಕೆಲವೆಡೆ ಗುಡುಗು ಸಹಿತ ಧಾರಾಕಾರ ಮಳೆಯಾಗುವ" ಬಗ್ಗೆ ಮುನ್ಸೂಚನೆ ನೀಡಿದೆ.