ಜೆಎನ್ಯು ವಿದ್ಯಾರ್ಥಿಗಳ ಬೆಂಬಲಕ್ಕೆ ನಿಂತ ಕನ್ನಡತಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ
ಜೆಎನ್ಯು ಕ್ಯಾಂಪಸ್‌ನಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರವನ್ನು ಪ್ರತಿಭಟಿಸಿದ ವಿದ್ಯಾರ್ಥಿಗಳಿಗೆ ಒಗ್ಗಟ್ಟನ್ನು ತೋರಿಸಲು ನಟಿ ದೀಪಿಕಾ ಪಡುಕೋಣೆ ಮಂಗಳವಾರ ಸಂಜೆ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದರು.
ನವದೆಹಲಿ: ಜೆಎನ್‌ಯು ಕ್ಯಾಂಪಸ್‌ನಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರವನ್ನು ಪ್ರತಿಭಟಿಸಿದ ವಿದ್ಯಾರ್ಥಿಗಳಿಗೆ ಒಗ್ಗಟ್ಟನ್ನು ತೋರಿಸಲು ನಟಿ ದೀಪಿಕಾ ಪಡುಕೋಣೆ ಮಂಗಳವಾರ ಸಂಜೆ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದರು.
ನಟಿ ದೀಪಿಕಾ ಪಡುಕೋಣೆ ಜೆಎನ್ಯು ವಿವಿ ಆವರಣದಲ್ಲಿರುವ ಸಾಬರಮತಿ ಟಿ-ಪಾಯಿಂಟ್ ನಲ್ಲಿ ಇತ್ತೀಚಿಗೆ ಅಪರಿಚಿತ ದುಷ್ಕರ್ಮಿಗಳಿಂದ ದಾಳಿಗೊಳಗಾದ ವಿದ್ಯಾರ್ಥಿಗಳ ಜೊತೆ ನಿಂತು ಬೆಂಬಲ ವ್ಯಕ್ತಪಡಿಸಿದರು.
ಸೋಮವಾರದಂದು ರಾತ್ರಿ ಬಾಲಿವುಡ್ ಸೆಲೆಬ್ರಿಟಿಗಳಾದ ನಿರ್ದೇಶಕರಾದ ವಿಶಾಲ್ ಭರದ್ವಾಜ್, ಅನುರಾಗ್ ಕಶ್ಯಪ್, ಜೋಯಾ ಅಖ್ತರ್ ಮತ್ತು ನಟರಾದ ತಪ್ಸಿ ಪನ್ನು ಮತ್ತು ರಿಚಾ ಚದ್ದಾ ಅವರು ಜೆಎನ್‌ಯುನಲ್ಲಿನ ಹಿಂಸಾಚಾರದಲ್ಲಿ ಗಾಯಗೊಂಡ ವಿದ್ಯಾರ್ಥಿಗಳ ಪರವಾಗಿ ಬೆಂಬಲ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲದೆ ವಿವಿಯಲ್ಲಿ ನಡೆದ ಹಿಂಸಾಚಾರದ ಘಟನೆಯನ್ನು ತೀವ್ರವಾಗಿ ಖಂಡಿಸಿದರು.
ಮುಖವಾಡದ ದುಷ್ಕರ್ಮಿಗಳ ಗುಂಪುಗಳು ಕ್ಯಾಂಪಸ್‌ಗೆ ನುಗ್ಗಿ ಸಬರಮತಿ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳ ಮೇಲೆ ಕೋಲುಗಳು ಮತ್ತು ಲೋಹದ ರಾಡ್ ಗಳಿಂದ ಹಲ್ಲೆ ನಡೆಸಿದ ನಂತರ ಜೆಎನ್‌ಯು ನಲ್ಲಿ ಉದ್ವಿಗ್ನತೆ ಉಂಟಾಗಿದೆ. ಈ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಮತ್ತು ಎಬಿವಿಪಿ ಸದಸ್ಯರು ಪರಸ್ಪರ ಆರೋಪ ಮಾಡುತ್ತಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.