ಬೆಂಗಳೂರು: ದೇಶದ ಮಾಜಿ ಪ್ರಧಾನಿಗಳು, ಅಜಾತ ಶತ್ರು ಅಟಲ್ ಬಿಹಾರಿ ವಾಜಪೇಯಿ ಅವರು ಇಹಲೋಕ ತ್ಯಜಿಸಿದ್ದು ನೋವುಂಟು ಮಾಡಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಸಂತಾಪ ಸೂಚಿಸಿದ್ದಾರೆ. 



COMMERCIAL BREAK
SCROLL TO CONTINUE READING

ಗುರುವಾರ ಬಿಬಿಎಂಪಿ ವತಿಯಿಂದ ಆಯೋಜಿಸಿದ್ದ ಕೆಂಪೇಗೌಡ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಮುಂದೂಡಿ, ಬಳಿಕ ಮಾತನಾಡಿದ ಅವರು, ಅಟಲ್ ಬಿಹಾರಿ ವಾಜಪೇಯಿ ಅವರು ಒಂಬತ್ತು ವರ್ಷದಿಂದ ಆರೋಗ್ಯದ ವಿಚಾರದಲ್ಲಿ ಬಹಳ‌ ಕಷ್ಟದಲ್ಲಿ‌ ಜೀವನ ನಡೆಸಿದರು. ವಾರದಿಂದೀಚೆಗೆ ಆರೋಗ್ಯ ಸಮಸ್ಯೆ ತೀರಾ ಹದಗೆಟ್ಟಿತ್ತು. ಗುರುವಾರ ಬೆಳಗ್ಗೆಯಿಂದ ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಹಳ ದುಃಖವಾಗಿತ್ತು. ಅವರ ಆರೋಗ್ಯ ಸುಧಾರಿಸಲಿ ಎಂದು ಕೇಳಿಕೊಂಡಿದ್ದೆವು, ಆದರೆ ಫಲಿಸಲಿಲ್ಲ. 


ಪೋಖ್ರಾನ್ ಅಣುಶಕ್ತಿ ಪ್ರರೀಕ್ಷಿಸುವ ದಿಟ್ಟತನ ತೋರಿದ್ದ ಅವರು, ಸಾಕಷ್ಟು‌ ಮೆಚ್ಚುಗೆ ಪಡೆದುಕೊಂಡಿದ್ದರು. ಅಣುಶಕ್ತಿ ಸಾಲಿನಲ್ಲಿ ಭಾರತವೂ ಸೇರಿದೆ ಎಂಬುದನ್ನು ಸಾಬೀತು ಮಾಡಿದ್ದರು. ನೆರೆರಾಷ್ಟ್ರದೊಂದಿಗೆ ಸ್ನೇಹ ಸೌಹಾರ್ದ ಬೆಳೆಸಬೇಕೆಂದು ಹೊರಟವರು ಅವರು.
ರಾಜಕೀಯದಲ್ಲೂ ಯಾರ ಬಳಿಯು ದ್ವೇಷ ಸಂಪಾದಿಸಿದವರಲ್ಲ. ಇಂಥ ಒಬ್ಬ ಅಜಾತ ಶತ್ರುವನ್ನು ನಾವು ಕಳೆದುಕೊಂಡಿದ್ದೇವೆ. ಆದರ್ಶ ಮತ್ತು ಸರಳ ಜೀವನ ನಡೆಸಿದ್ದ ವಾಜಪೇಯಿ ಅವರು ಎಲ್ಲರಿಗೂ ಮಾದರಿಯಾಗಿದ್ದರು. 


ದೇಶ ಕಂಡ ಅಪ್ರತಿಮ ನಾಯಕ ಇನ್ನಿಲ್ಲ ಎಂಬ ನೋವು ತಡೆಯುವ ಶಕ್ತಿ ನಮಗೆಲ್ಲರಿಗೂ ಆ ಭಗವಂತ ನೀಡಲಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಂತಾಪ‌ ನುಡಿದರು.