ದೆಹಲಿ ಮತದಾರರಿಗೆ ಕೇಜ್ರಿವಾಲ್ ಬಂಪರ್ ಚುನಾವಣಾ ಆಫರ್ !
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ದೆಹಲಿ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಮತದಾರರಿಗೆ 10-ಪಾಯಿಂಟ್ ಗ್ಯಾರಂಟಿ ಕಾರ್ಡ್ ಭರವಸೆ ನೀಡಿದ್ದಾರೆ.
ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ದೆಹಲಿ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಮತದಾರರಿಗೆ 10-ಪಾಯಿಂಟ್ ಗ್ಯಾರಂಟಿ ಕಾರ್ಡ್ ಭರವಸೆ ನೀಡಿದ್ದಾರೆ.
ಇದು ಉಚಿತ ವಿದ್ಯುತ್, ಟ್ಯಾಪ್ನಲ್ಲಿ 24 ಗಂಟೆಗಳ ಕುಡಿಯುವ ನೀರು ಮತ್ತು ಪ್ರತಿ ಮಗುವಿಗೆ ವಿಶ್ವ ದರ್ಜೆಯ ಶಿಕ್ಷಣವನ್ನು ಖಾತರಿಪಡಿಸುತ್ತದೆ . ಅದರೊಂದಿಗೆ, ಸ್ವಚ್ಚ ಯಮುನಾ ಸೇರಿದಂತೆ ಸ್ವಚ್ಚ ಪರಿಸರ ಮತ್ತು ಪ್ರತಿ ಕೊಳೆಗೇರಿ ನಿವಾಸಿಗಳಿಗೆ ವಸತಿ ನೀಡುವ ಭರವಸೆ ಕೇಜ್ರಿವಾಲ್ ನೀಡಿದ್ದಾರೆ.
"ಇದು ನಮ್ಮ ಪ್ರಣಾಳಿಕೆ ಅಲ್ಲ. ಇದು ನಮ್ಮ ಮುಂದಿರುವ ಎರಡು ಹೆಜ್ಜೆ. ಇವು ದೆಹಲಿ ಜನರ ಮೇಲೆ ಪರಿಣಾಮ ಬೀರುವ ಸಮಸ್ಯೆಗಳು. ಪ್ರಣಾಳಿಕೆಯಲ್ಲಿರುವ ಅಂಶಗಳು ಪ್ರಗತಿ ಹಾದಿಯಲ್ಲಿದೆ. ಅದರಲ್ಲಿ ಎಲ್ಲ ವಿವರಗಳಿವೆ" ಎಂದು ಅರವಿಂದ್ ಕೇಜ್ರಿವಾಲ್ ಇಂದು ಮಧ್ಯಾಹ್ನ ಪತ್ರಿಕಾಗೋಷ್ಠಿಯಲ್ಲಿ ಮತದಾರರಿಗೆ ತಿಳಿಸಿದರು.
ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷವು 2015 ರ ಚುನಾವಣೆಗೆ ಮುಂಚಿತವಾಗಿ ಮಾಡಿದ ವಿದ್ಯುತ್ ಮತ್ತು ನೀರನ್ನು ಕಡಿಮೆ ಮಾಡುವ ಭರವಸೆಯ ಅನುಷ್ಠಾನವು ದೆಹಲಿಯಲ್ಲಿ ತಳಮಟ್ಟದ ಬೆಂಬಲವನ್ನು ತಂದಿದೆ ಎನ್ನಲಾಗಿದೆ. ಕೇಜ್ರಿವಾಲ್ ಸರ್ಕಾರ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ತಿಂಗಳುಗಳ ನಂತರ, ಇದು 200 ಘಟಕ ಉಚಿತ ವಿದ್ಯುತ್ ಮತ್ತು 20,000 ಲೀಟರ್ ವರೆಗೆ ಉಚಿತ ನೀರನ್ನು ಜಾರಿಗೊಳಿಸಿತು.ಇದಲ್ಲದೆ ನೆರೆಹೊರೆಯ ಚಿಕಿತ್ಸಾಲಯಗಳ ಮೂಲಕ ಉಚಿತ ಆರೋಗ್ಯ ಸೇವೆ ಮತ್ತು ನಗರದ ಸರ್ಕಾರಿ ಶಾಲೆಗಳ ಪುನರುಜ್ಜೀವನದಂತಹ ಕ್ರಮಗಳನ್ನು ಜಾರಿಗೆ ತಂದಿವೆ. ಈಗ ಇವು ಈ ಚುನಾವಣೆಯಲ್ಲಿ ಪಕ್ಷಕ್ಕೆ ಗೆಲುವಿನ ಪ್ರಮುಖ ಅಂಶಗಳಾಗಿವೆ ಎನ್ನಲಾಗಿದೆ.
ಈ ಬಾರಿ, ಪ್ರತಿ ಚಳಿಗಾಲದಲ್ಲೂ ನಗರವನ್ನು ಗ್ಯಾಸ್ ಚೇಂಬರ್ ಎಂದು ಕರೆಯುವ ಮಾಲಿನ್ಯದ ದೃಷ್ಟಿಯಿಂದ, ಎಎಪಿ ಮಾಲಿನ್ಯವನ್ನು ಶೇಕಡಾ 300 ರಷ್ಟು ತಗ್ಗಿಸುವ ಗುರಿ ಹೊಂದಿದೆ ಎಂದು ಹೇಳಿದೆ. ಅಲ್ಲದೆ 2 ಕೋಟಿ ಮರಗಳನ್ನು ನೆಡುವುದನ್ನು ಕೂಡ ಪ್ರಮುಖ ಆಧ್ಯತೆಯನ್ನಾಗಿಸಿದೆ. ಇದರ ಜೊತೆಗೆ ಯಮುನಾ ನದಿಯನ್ನು ಸ್ವಚ್ಛಗೊಳಿಸಿಸುವುದು ಈ ಬಾರಿಯ ಪ್ರಮುಖ ಪ್ರಣಾಳಿಕೆ ಘೋಷಣೆಯಾಗಿದೆ.
2015 ರ ವಿಧಾನಸಭಾ ಚುನಾವಣೆಯಲ್ಲಿ ದೆಹಲಿಯ 70 ಸ್ಥಾನಗಳಲ್ಲಿ 67 ಸ್ಥಾನಗಳನ್ನು ಆಮ್ ಆದ್ಮಿ ಪಕ್ಷ ಗೆದ್ದಿತ್ತು. ಈ ಬಾರಿ ಅವರ ಪಕ್ಷ ಎಲ್ಲಾ 70 ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಿದೆ. ಎಎಪಿ ಈಗಾಗಲೇ ಎಲ್ಲಾ 70 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಹೆಸರಿಸಿದ್ದು, 46 ಹಾಲಿ ಶಾಸಕರು ಮತ್ತು 24 ಹೊಸ ಮುಖಗಳನ್ನು ಕಣಕ್ಕಿಳಿಸಿದೆ.ದೆಹಲಿಯಲ್ಲಿ ವಿಧಾನಸಭಾ ಚುನಾವಣೆ ಫೆಬ್ರವರಿ 8 ರಂದು ನಡೆಯಲಿದ್ದು, ಮೂರು ದಿನಗಳ ನಂತರ ಮತ ಎಣಿಕೆ ನಡೆಯಲಿದೆ.