ದೆಹಲಿಯಲ್ಲಿ ವಿದ್ಯುತ್-ನೀರಿನ ಸಮಸ್ಯೆ: ಸಿಎಂ ಕೇಜ್ರಿವಾಲ್ ಭೇಟಿಯಾದ ಕಾಂಗ್ರೆಸ್ ನಾಯಕರು
ಕಾಂಗ್ರೆಸ್ ನಾಯಕರು ವಿದ್ಯುತ್ ಮತ್ತು ನೀರಿನ ವಿಷಯದ ಬಗ್ಗೆ ಚರ್ಚಿಸಲು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿ ಮಾಡಿದರು.
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಿದ್ಯುತ್ ಬಿಲ್ ನಲ್ಲಿ ಸ್ಥಿರ ಶುಲ್ಕದ ಹೆಚ್ಚಳ ಹಾಗೂ ವಿದ್ಯುತ್ ಕಡಿತಕ್ಕೆ ಸಂಬಂಧಿಸಿದಂತೆ ಮತ್ತು ನೀರಿನ ಕೊರತೆ ಬಗ್ಗೆ ಚರ್ಚಿಸಲು ದೆಹಲಿ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶೀಲಾ ದೀಕ್ಷಿತ್ ನೇತೃತ್ವದ ಪಕ್ಷದ ಮುಖಂಡರು ಬುಧವಾರ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿ ಮಾಡಿದರು.
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ನಿವಾಸದಲ್ಲಿ ಅವರನ್ನು ಭೇಟಿಯಾದ ಕಾಂಗ್ರೆಸ್ ನಾಯಕರು ರಾಜ್ಯದಲ್ಲಿನ ವಿದ್ಯುತ್ ದರ ಹೆಚ್ಚಳ ಮತ್ತು ನೀರಿನ ಸಮಸ್ಯೆ ಕುರಿತಂತೆ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷೆ ಶೀಲಾ ದೀಕ್ಷಿತ್, ದೆಹಲಿ ಕಾಂಗ್ರೆಸ್ ಕಾರ್ಯದರ್ಶಿ ಹರೂನ್ ಯೂಸುಫ್ ಮತ್ತು ರಾಜೇಶ್ ಲಿಲೋಥಿಯಾ ಉಪಸ್ಥಿತರಿದ್ದರು.
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಯೂಸುಫ್, "ನಾವು ದೆಹಲಿಯ ಹಲವು ಪ್ರದೇಶಗಳಲ್ಲಿ ವಿದ್ಯುತ್ ನಿಗದಿತ ಶುಲ್ಕ ಮತ್ತು ನೀರಿನ ಕೊರತೆ ಸಮಸ್ಯೆಯ ಬಗ್ಗೆ ಚರ್ಚಿಸಿದ್ದೇವೆ. ಕೇಜ್ರಿವಾಲ್ ಅವರ ಸರ್ಕಾರಿ ಮಂತ್ರಿಗಳು ಚುನಾವಣಾ ಸಂಹಿತೆಯ ನೀತಿ ಕಾರಣದಿಂದಾಗಿ ನಿಗದಿತ ಶುಲ್ಕವನ್ನು ಕಡಿಮೆ ಮಾಡಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದರು. ಆದರೆ, ಕಳೆದ ಒಂದು ವರ್ಷದಿಂದ ವಿದ್ಯುತ್ ನಿಗದಿತ ಶುಲ್ಕ ಹೆಚ್ಚಾಗಿದೆ. ವರ್ಷದಿಂದ ಚುನಾವಣಾ ನೀತಿ ಸಂಹಿತೆ ಜಾರಿ ಇರಲಿಲ್ಲ ಎಂದು ಹೇಳಿದ್ದಾರೆ.
ಕೇಜ್ರಿವಾಲ್ ಸರ್ಕಾರ 24 ಗಂಟೆ ವಿದ್ಯುತ್ ಒದಗಿಸಲಾಗುತ್ತಿದೆ ಎಂದು ಹೇಳುತ್ತಿದೆ. ಆದರೆ ಕೊಳಗೇರಿಗಳಲ್ಲಿ ಹೆಚ್ಚಾಗಿ ಪವರ್ ಕಟ್ ಆಗುತ್ತಿದೆ. ಶೀಲಾ ದೀಕ್ಷಿತ್ ಅವರ ಅಧಿಕಾರವಧಿಯಲ್ಲಿ ವಿದ್ಯುತ್ ಕಡಿತದ ದೂರಿನ ಬಗ್ಗೆ ತಕ್ಷಣ ಕ್ರಮ ತೆಗೆದುಕೊಳ್ಳಲಾಗುತ್ತಿತ್ತು. ವಿದ್ಯುತ್ ಕಡಿತ ನಿಲ್ಲಿಸುವಂತೆ ಹಾಗೂ ನಿಗದಿತ ಶುಲ್ಕವನ್ನು ಕಡಿಮೆಮಾಡುವಂತೆ ಸರ್ಕಾರವನ್ನು ಒತ್ತಾಯಿಸಿದ್ದೇವೆ. ಶುಲ್ಕ ಕಡಿಮೆ ಮಾಡುವುದಾಗಿ ಮುಖ್ಯಮಂತ್ರಿಗಳು ಆಶ್ವಾಸನೆ ನೀಡಿದ್ದಾರೆ ಎಂದು ಅವರು ತಿಳಿಸಿದರು.
"ದೆಹಲಿಯ ಹಲವು ಪ್ರದೇಶಗಳಲ್ಲಿ ನೀರಿನ ಕೊರತೆ ಇದೆ. ಈ ಸರ್ಕಾರವು ಉಚಿತ ನೀರನ್ನು ಕುರಿತು ಮಾತಾಡುತ್ತಿದೆ ಆದರೆ ಜನರು ನೀರನ್ನು ಪಡೆಯುತ್ತಿಲ್ಲ. ನೀರಿನ ಸಮಸ್ಯೆಯನ್ನು ಕೂಡ ತಕ್ಷಣ ನಿವಾರಿಸಬೇಕೆಂದು ನಾವು ಸರ್ಕಾರವನ್ನು ಒತ್ತಾಯಿಸಿದ್ದೇವೆ" ಎಂದು ಯೂಸುಫ್ ಹೇಳಿದರು.