ಮಾನಹಾನಿ ಪ್ರಕರಣ: ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸೋಡಿಯಾಗೆ ದೆಹಲಿ ಕೋರ್ಟ್ ಜಾಮೀನು
ಆಮ್ ಆದ್ಮಿ ಪಕ್ಷದ ಈ ಇಬ್ಬರೂ ಮುಖಂಡರಿಗೆ ತಲಾ 10,000 ರೂ.ಗಳ ಬಾಂಡ್ ಮೇಲೆ ಜಾಮೀನು ನೀಡಲಾಗಿದ್ದು, ಮಾನಹಾನಿ ಪ್ರಕರಣದ ಮುಂದಿನ ವಿಚಾರಣೆಯನ್ನು ಜುಲೈ 25ಕ್ಕೆ ಕೋರ್ಟ್ ನಿಗದಿ ಮಾಡಿದೆ.
ನವದೆಹಲಿ: ಬಿಜೆಪಿ ನಾಯಕ ವಿಜೇಂದರ್ ಗುಪ್ತಾ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿಗೆ ದೆಹಲಿ ವಿಶೇಷ ನ್ಯಾಯಾಲಯ ಮಂಗಳವಾರ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ.
ಅಲ್ಲದೆ, ಆಮ್ ಆದ್ಮಿ ಪಕ್ಷದ ಈ ಇಬ್ಬರೂ ಮುಖಂಡರಿಗೆ ತಲಾ 10,000 ರೂ.ಗಳ ಬಾಂಡ್ ಮೇಲೆ ಜಾಮೀನು ನೀಡಲಾಗಿದ್ದು, ಮಾನಹಾನಿ ಪ್ರಕರಣದ ಮುಂದಿನ ವಿಚಾರಣೆಯನ್ನು ಜುಲೈ 25ಕ್ಕೆ ಕೋರ್ಟ್ ನಿಗದಿ ಮಾಡಿದೆ.
ಜುಲೈ 8 ರಂದು ನಡೆದ ಪ್ರಕರಣದ ವಿಚಾರಣೆ ವೇಳೆ ರೋಸ್ ಅವೆನ್ಯೂ ನ್ಯಾಯಾಲಯ ಕೇಜ್ರಿವಾಲ್ ಮತ್ತು ಸಿಸೋಡಿಯಾ ಇಬ್ಬರಿಗೂ ಸಮನ್ಸ್ ನೀಡಿತ್ತು. ಮೊಕದ್ದಮೆಯ ವೆಚ್ಚಗಳಲ್ಲದೆ, 1 ಕೋಟಿ ರೂ. ಹಣವನ್ನೂ ಸಹ ಉಭಯ ನಾಯಕರು ಪರಿಹಾರವಾಗಿ ನೀಡಬೇಕೆಂದು ದೆಹಲಿ ಬಿಜೆಪಿ ಮುಖಂಡ ಗುಪ್ತಾ ಮನವಿ ಸಲ್ಲಿಸಿದ್ದರು.
ದೆಹಲಿ ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕರಾಗಿರುವ ಗುಪ್ತಾ, ದೆಹಲಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ತನ್ನನ್ನು ಕೊಲ್ಲಲು ಯತ್ನಿಸಿದ್ದಾರೆಂದು ಸುಳ್ಳು ಆರೋಪ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಆರೋಪಗಳು ತಮ್ಮ ತೇಜೋವಧೆ ಮಾಡುವಂತಹದ್ದಾಗಿದ್ದು, ನ್ಯಾಯ ಒದಗಿಸುವಂತೆ ಕೋರ್ಟ್ ಮೊರೆ ಹೋಗಿದ್ದರು.
ಇದೇ ವೇಳೆ, ಕೇಜ್ರಿವಾಲ್ ಅವರನ್ನು ಹತ್ಯೆ ಮಾಡುವುದಿರಲಿ, ಉದ್ದೇಶಪೂರ್ವಕವಾಗಿ ಅಥವಾ ಮತ್ತೊಬ್ಬರನ್ನು ನೋಯಿಸುವಂತಹ ಕಾರ್ಯಗಳ ಬಗ್ಗೆ ನನ್ನಿಂದ ಯೋಚಿಸಲೂ ಸಹ ಸಾಧ್ಯವಿಲ್ಲ ಎಂದು ಗುಪ್ತಾ ಮೊಕದ್ದಮೆಯಲ್ಲಿ ಹೇಳಿದ್ದಾರೆ.