ನಿಮ್ಮ ಬಳಿ ಬೈಕ್, ಕಾರ್ ಇದೆಯೇ? ಹಾಗಿದ್ದರೆ ಅಕ್ಟೋಬರ್ ಒಳಗೆ ಈ ನಿಯಮ ಪಾಲಿಸದಿದ್ದರೆ ಜೈಲೇ ಗತಿ!
2012 ರಲ್ಲಿಯೇ ಸರ್ವೋಚ್ಚ ನ್ಯಾಯಾಲಯವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಎಲ್ಲಾ ವಾಹನಗಳಿಗೆ ಹೆಚ್ಚಿನ ಭದ್ರತಾ ನೋಂದಣಿ ಫಲಕಗಳನ್ನು ಅಳವಡಿಸುವಂತೆ ನಿರ್ದೇಶನ ನೀಡಿತ್ತು.
ನವದೆಹಲಿ: ವಾಹನ ಸವಾರರು ತಮ್ಮ ದ್ವಿಚಕ್ರ ಮತ್ತು ನಾಲ್ಕು ಚಕ್ರ ವಾಹನಗಳಿಗೆ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಅಳವಡಿಸುವುದನ್ನು ಕಡ್ಡಾಯಗೊಳಿಸಿದ್ದು, ಈ ನಿಯಮ ಪಾಲಿಸದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಿದೆ.
ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ವರದಿ ಪ್ರಕಾರ, ದೆಹಲಿಯ ರಾಜ್ಯ ಸಾರಿಗೆ ಇಲಾಖೆಯು ವಾಹನಗಳಿಗೆ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಅಳವಡಿಸುವುದನ್ನು ಕಡ್ಡಾಯ ಮಾಡಿದ್ದು, ಇದಕ್ಕಾಗಿ ಅಕ್ಟೋಬರ್ 13ರವರೆಗೆ ಗಡುವು ನೀಡಿದೆ. ಈ ಅಂತಿಮ ದಿನಾಂಕದ ನಂತರವೂ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಅಳವಡಿಸದಿದ್ದರೆ, 500 ರೂ. ದಂಡ ಅಥವಾ ವಾಹನ ಮಾಲಿಕನಿಗೆ 3 ತಿಂಗಳ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಸಾರಿಗೆ ಇಲಾಖೆ ತಿಳಿಸಿದೆ.
"ನಂಬರ್ ಪ್ಲೇಟ್ ಬದಲಾಯಿಸುವ ಪ್ರಕ್ರಿಯೆ ಅಕ್ಟೋಬರ್ 2 ರಿಂದ ಆರಂಭಗೊಳ್ಳಲಿದ್ದು, ಈಗಾಗಲೇ ಇದಕ್ಕಾಗಿ ಒಟ್ಟು 13 ಕೇಂದ್ರಗಳನ್ನು ತೆರೆಯಲಾಗಿದೆ. ಈ ಕುರಿತಾಗಿ ಜನರಲ್ಲಿ ಜಾಗೃತಿ ಮೂಡಿಸಲು ಅಭಿಯಾನಗಳನ್ನೂ ಆರಂಭಿಸಿದ್ದು, ಪತ್ರಿಕೆಗಳಲ್ಲಿ ಜಾಹೀರಾತುಗಳೂ ಪ್ರಕಟವಾಗಿವೆ. ನಮ್ಮ ಅಂದಾಜಿನ ಪ್ರಕಾರ ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳನ್ನೂ ಒಳಗೊಂಡಂತೆ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಇಲ್ಲದ 40 ಲಕ್ಷ ವಾಹನಗಳಿವೆ" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
2012 ರಲ್ಲಿಯೇ ಸರ್ವೋಚ್ಚ ನ್ಯಾಯಾಲಯವು ಆ ವರ್ಷದ ಜೂನ್ 15 ರೊಳಗೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಎಲ್ಲಾ ವಾಹನಗಳಿಗೆ ಹೆಚ್ಚಿನ ಭದ್ರತಾ ನೋಂದಣಿ ಫಲಕಗಳನ್ನು ಅಳವಡಿಸುವಂತೆ ನಿರ್ದೇಶನ ನೀಡಿತ್ತು. ಅಲ್ಲದೆ, ಈ ನಿಯಮ ಪಾಲಿಸದವರ ವಿರುದ್ಧ ನಿಯಮ ಉಲ್ಲಂಘನೆ ಪ್ರಕರಣ ದಾಖಲಿಸುವುದಾಗಿ ಸುಪ್ರೀಂ ಕೋರ್ಟ್ ತಿಳಿಸಿತ್ತು.