ನವದೆಹಲಿ: ಮಹಿಳಾ ಸುರಕ್ಷತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಎಲ್ಲಾ ಸಾರ್ವಜನಿಕ ಸಾರಿಗೆ ವಾಹನಗಳಲ್ಲಿ  ಪ್ಯಾನಿಕ್ ಬಟನ್(ತುರ್ತು ಸಂದೇಶ) ಅಳವಡಿಕೆಯನ್ನು ದೆಹಲಿ ಸರ್ಕಾರ ಕಡ್ಡಾಯಗೊಳಿಸಿದೆ. 


COMMERCIAL BREAK
SCROLL TO CONTINUE READING

ಜನವರಿ 1, 2019 ರಿಂದ ಹೊಸದಾಗಿ ನೋಂದಣಿಯಾಗುವ ಎಲ್ಲಾ ಸಾರ್ವಜನಿಕ ಸಾರಿಗೆ ವಾಹನಗಳಿಗೆ ಈ ನಿಯಮ ಕಡ್ಡಾಯವಾಗಿದ್ದು, ಹಳೆಯ ವಾಹನಗಳಲ್ಲಿ ಪ್ಯಾನಿಕ್ ಬಟನ್ ಅಳವಡಿಕೆಗೆ ಏಪ್ರಿಲ್ 1, 2019ರವರೆಗೆ ಗಡುವು ನೀಡಲಾಗಿದೆ. ಒಂದು ವೇಳೆ ವಾಹನಗಳು ಪ್ಯಾನಿಕ್ ಬಟನ್ ಅಳವಡಿಸುವುದನ್ನು ನಿರ್ಲಕ್ಷಿಸಿದಲ್ಲಿ, ಆ ವಾಹನಗಳಿಗೆ ಫಿಟ್ ನೆಸ್ ಸರ್ಟಿಫಿಕೇಟ್ ನೀಡಲಾಗುವುದಿಲ್ಲ ಎಂದು ದೆಹಲಿ ಸರ್ಕಾರ ಸ್ಪಷ್ಟಪಡಿಸಿದೆ. 


ಪ್ರಸ್ತುತ ದೆಹಲಿಯಲ್ಲಿ ಬಸ್, ಟ್ಯಾಕ್ಸಿ, ಶಾಲಾ ವಾಹನ, ಗ್ರಾಮೀಣ ಸಾರಿಗೆ ಸೇರಿದಂತೆ ಸುಮಾರು 1.10 ಮಿಲಿಯನ್ ಸಾರ್ವಜನಿಕ ಸಾರಿಗೆ ವಾಹನಗಳಿವೆ. ಒಂದು ವೇಳೆ, ಈ ವಾಹನಗಳು ಸಾರಿಗೆ ನಿಯಮ ಪಾಲಿಸದಿದ್ದಲ್ಲಿ, ಫಿಟ್ ನೆಸ್ ಸರ್ಟಿಫಿಕೇಟ್ ಇಲ್ಲದಿದ್ದಲ್ಲಿ, ಕೂಡಲೇ ಸಾರಿಗೆ ಇಲಾಖೆ ವಾಹನ ಸೀಜ್ ಮಾಡುವ ಸಾದ್ಯತೆ ಇದೆ. 


ಏನಿದು ಪ್ಯಾನಿಕ್ ಬಟನ್?
ಕಳ್ಳರ ದಾಳಿ, ಅತ್ಯಾಚಾರ ಯತ್ನ, ಅಪಘಾತದಂಥ ಅಪಾಯದ ಸಂದರ್ಭದಲ್ಲಿ ವಾಹನದಲ್ಲಿರುವ ಪ್ಯಾನಿಕ್‌ ಬಟನ್‌ ಒತ್ತಿದರೆ, ವಾಹನ ಯಾವ ಸ್ಥಳದಲ್ಲಿದೆ ಎಂಬುದು ತಿಳಿಯುವುದಲ್ಲದೆ, ಸಹಾಯಕ್ಕೆ ಧಾವಿಸಲು ಅನುಕೂಲವಾಗಲಿದೆ. ಮುಖ್ಯವಾಗಿ ಮಹಿಳಾ ರಕ್ಷಣೆ, ಸುರಕ್ಷಣೆ ದೃಷ್ಟಿಯಿಂದ ದೆಹಲಿ ಸರ್ಕಾರ ಕೇಂದ್ರ ಸರ್ಕಾರದ ಈ ಆದೇಶವನ್ನು ಜಾರಿ ಮಾಡಿದೆ.