ನವದೆಹಲಿ: ರಾಷ್ಟ್ರೀಯ ರಾಜಧಾನಿಯಲ್ಲಿ ದೆಹಲಿ ಕರ್ನಾಟಕ ಸಂಘದ ಮುಂದೆ ಹೊಸದಾಗಿ ನಿರ್ಮಾಣವಾಗಿರುವ ಮೆಟ್ರೋ ನಿಲ್ದಾಣಕ್ಕೆ ಸರ್ ಎಂ. ವಿಶ್ವೇಶ್ವರಯ್ಯ ಹೆಸರು ಇಡಬೇಕೆಂಬ ಕನ್ನಡಿಗರ ಬೇಡಿಕೆಯನ್ನು ಕೇಂದ್ರ ಸರ್ಕಾರ ಪುರಸ್ಕರಿಸಿದೆ. ಕನ್ನಡಿಗರ ಕೂಗಿಗೆ ಕಡೆಗೂ ಮನ್ನಣೆ ನೀಡಿರುವ ಕೇಂದ್ರ ಸರ್ಕಾರ ದೆಹಲಿ ಕರ್ನಾಟಕ ಸಂಘದ ಮುಂಭಾಗದಲ್ಲಿರುವ ಮೋತಿ ಬಾಗ್ ಮೆಟ್ರೋ ನಿಲ್ದಾಣಕ್ಕೆ ಕರ್ನಾಟಕ ಮೂಲದ ಅಪ್ರತಿಮ ವಿಜ್ಞಾನಿ ಸರ್ ಎಂ. ವಿಶ್ವೇಶ್ವರಯ್ಯ ಹೆಸರನ್ನು ನಾಮಕರಣ ಮಾಡಿದೆ. 


COMMERCIAL BREAK
SCROLL TO CONTINUE READING

ದೆಹಲಿಯ ಪಿಂಕ್ ಲೈನ್ ನಲ್ಲಿ ಬರುವ ವಿಶ್ವೇಶ್ವರಯ್ಯ ಮೆಟ್ರೋ ನಿಲ್ದಾಣವನ್ನು ಕೇಂದ್ರ ನಗರಾಭಿವೃದ್ಧಿ ಸಚಿವ ಹರ್ದಿಪ್ ಸಿಂಗ್, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಕೇಂದ್ರ ಸಚಿವ ಅನಂತ್ ಕುಮಾರ್ ಇಂದು ಉದ್ಘಾಟಿಸಿದರು.


ಈ ನಿಲ್ದಾಣವು ದೆಹಲಿ ಕರ್ನಾಟಕ ಸಂಘದ ಮುಂಭಾಗವೇ ಇದ್ದುದರಿಂದ ವಿಶ್ವೇಶ್ವರಯ್ಯ ಹೆಸರಿಡಲು ದೆಹಲಿ ಕರ್ನಾಟಕ ಸಂಘ ಮತ್ತು ಕನ್ನಡಿಗರು ಮನವಿ ಮಾಡಿದ್ದರು.


ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಸದಾನಂದ ಗೌಡ, ರಾಜ್ಯದ ಜನರ ಭಾವನೆಗೆ ಇಂದು ರಾಷ್ಟ್ರ ರಾಜಧಾನಿಯಲ್ಲಿ ಬೆಲೆ ಸಿಕ್ಕಿದೆ. ಕರ್ನಾಟಕದವರ ವಿಚಾರಗಳನ್ನು ದೆಹಲಿಯಲ್ಲಿ ಬಿಂಬಿಸಲು ಸಾಧ್ಯವಾಗಿದೆ. ದೆಹಲಿ ಮೆಟ್ರೋ ನಿಲ್ದಾಣಕ್ಕೆ ಸರ್ ಎಂ. ವಿಶ್ವೇಶ್ವರಯ್ಯ ಹೆಸರಿಡಲಾಗಿದೆ. ದೆಹಲಿ ಮೆಟ್ರೋದಲ್ಲಿ ಪ್ರತಿ ದಿನ 35 ಲಕ್ಷ ಜನ ಓಡಾಡುತ್ತಾರೆ. ಅವರೆಲ್ಲರಿಗೂ ವಿಶ್ವೇಶ್ವರಯ್ಯ ಅವರನ್ನು ಪರಿಚಯಿಸಿದಂತಾಗುತ್ತದೆ. ದೆಹಲಿ ಕರ್ನಾಟಕ ಸಂಘದ ಪ್ರಯತ್ನದಿಂದ ಈ ಕೆಲಸ ಆಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.