ನವದೆಹಲಿ: ಪ್ರಮುಖ ಬೆಳವಣಿಗೆಯೊಂದರಲ್ಲಿ ಜಮ್ಮು ಮತ್ತು ಕಾಶ್ಮೀರದ ಇಸ್ಲಾಮಿಕ್ ರಾಜ್ಯ(ISJK) ಭಯೋತ್ಪಾದಕ ಸಂಘಟನೆಗೆ ಸೇರಿದವರು ಎನ್ನಲಾದ ಇಬ್ಬರು ಶಂಕಿತ ಭಯೋತ್ಪಾದಕರನ್ನು ದೆಹಲಿ ಪೋಲಿಸ್'ನ ವಿಶೇಷ ಘಟಕ ಬಂಧಿಸಿದೆ. 


COMMERCIAL BREAK
SCROLL TO CONTINUE READING

ಕೆಲ ದಿನಗಳಿಂದ ಈ ಇಬ್ಬರು ಭಯೋತ್ಪಾದಕರು ಕಾಶ್ಮೀರ ಕಣಿವೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು ಎನ್ನಲಾಗಿದೆ. ಕಾಶ್ಮೀರ ಮೂಲದ ಈ ಇಬ್ಬರು ಭಯೋತ್ಪಾದಕರನ್ನು ಗುರುವಾರ ತಡರಾತ್ರಿ ದೆಹಲಿಯ ಕೆಂಪು ಕೋಟೆ ಪ್ರದೇಶದ ಬಳಿ ಇರುವ ಜಮ್ಮಾ ಮಸೀದಿ ಬಸ್ ನಿಲ್ದಾಣದ ಬಳಿ ಬಂಧಿಸಲಾಗಿದ್ದು, ಆರೋಪಿಗಳನ್ನು 5 ದಿನಗಳ ಪೊಲೀಸ್ ವಶಕ್ಕೆ ಪಡೆಯಲಾಗಿದೆ ಎಂದು ದೆಹಲಿ ಪೋಲಿಸ್'ನ ವಿಶೇಷ ಘಟಕದ ಡಿಸಿಪಿ ತಿಳಿಸಿದ್ದಾರೆ. 



ಬಂಧಿತ ಭಯೋತ್ಪಾದಕರಿಂದ ಎರಡು ಪಿಸ್ತೂಲ್, 10 ಗುಂಡುಗಳು ಮತ್ತು 4 ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ. ಅವರು ಉತ್ತರಪ್ರದೇಶದಿಂದ ಶಸ್ತ್ರಾಸ್ತ್ರಗಳನ್ನು ತೆಗೆದುಕೊಂಡು ಕಾಶ್ಮೀರಕ್ಕೆ ತೆರಳುತ್ತಿದ್ದರು ಎನ್ನಲಾಗಿದ್ದು, ಶಸ್ತ್ರಾಸ್ತ್ರಗಳನ್ನು ಭಯೋತ್ಪಾದಕ ಚಟುವಟಿಕೆಗಳಿಗೆ ಬಳಸಲು ಯೋಜಿಸಿದ್ದರು ಎಂದು ಡಿಸಿಪಿ ತಿಳಿಸಿದ್ದಾರೆ.


ಬಂಧಿತರನ್ನು ಪರ್ವೇಜ್ ಮತ್ತು ಜೆಮ್'ಶೆಡ್ ಎಂದು ಗುರುತಿಸಲಾಗಿದ್ದು, ಇಬ್ಬರೂ ಭಯೋತ್ಪಾದಕ ಸಂಘಟನೆ ಜಮ್ಮು-ಕಾಶ್ಮೀರ ಇಸ್ಲಾಮಿಕ್ ಸ್ಟೇಟ್ ಸದಸ್ಯರು ಎನ್ನಲಾಗಿದೆ. ಜನವರಿಯಲ್ಲಿ ಭದ್ರತಾಪಡೆ ಮತ್ತು ಭಯೋತ್ಪಾದಕರ ನಡುವೆ ನಡೆದ ಎನ್'ಕೌಂಟರ್ ನಲ್ಲಿ ಪರ್ವೇಜ್ ಸಹೋದರರನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. ಆತ ಆರಂಭದಲ್ಲಿ ಹಿಜ್ಬುಲ್ ಮುಜಾಹುದ್ದೀನ್ ಸದಸ್ಯನಾಗಿದ್ದು, ನಂತರದಲ್ಲಿ ISJK ಭಯೋತ್ಪಾದಕ ಸಂಘಟನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಂದು ದೆಹಲಿ ಪೋಲಿಸ್ ವಿಶೇಷ ಘಟಕದ ಡಿಸಿಪಿ ಎಎನ್ಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. 



ಆದರೆ, ದೆಹಲಿ ನಗರ ಬಂಧಿತ ಭಯೋತ್ಪಾದಕರ ಟಾರ್ಗೆಟ್ ಆಗಿರಲಿಲ್ಲ. ಅವರು ಕೇವಲ ದೆಹಲಿ ಮಾರ್ಗವಾಗಿ ಕಾಶ್ಮೀರಕ್ಕೆ ತೆರಳುತ್ತಿದ್ದರು. ಜಮ್ಮು ಕಾಶ್ಮೀರದ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಸಂಘಟನೆಯ ಇಬ್ಬರು ಮುಖಂಡರಾದ ಉಮರ್ ಇಬ್ಬನ್ ನಾಜಿರ್ ಮತ್ತು ಆದಿಲ್ ತ್ಹೋಕರ್ ಹೆಸರನ್ನು ವಿಚಾರಣೆ ಸಂದರ್ಭದಲ್ಲಿ ಆರೋಪಿಗಳು ಬಹಿರಂಗಪಡಿಸಿರುವುದಾಗಿ ಡಿಸಿಪಿ ಹೇಳಿದ್ದಾರೆ.


ಗುಪ್ತಚರ ಇಲಾಖೆ ನೀಡಿದ ಸೂಕ್ತ ಮಾಹಿತಿಯ ಆಧಾರದ ಮೇಲೆ ಭಯೋತ್ಪಾದಕರನ್ನು ಬಂಧಿಸಲಾಗಿದೆ. ಈ ಇಬ್ಬರ ಚಲನವಲನಗಳನ್ನು ಕೆಲ ಸಮಯದವರೆಗೆ ಸೂಕ್ಷ್ಮವಾಗಿ ಗ್ರಹಿಸಿದ ಭದ್ರತಾ ಏಜನ್ಸಿಗಳು, ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.