ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ದೆಹಲಿಯ ಸೀಮಾಪುರಿ ಪ್ರದೇಶದಲ್ಲಿ ಡಿಸೆಂಬರ್ 20ರಂದು ನಡೆದ ಹಿಂಸಾತ್ಮಕ ಪ್ರತಿಭಟನೆಯ ತನಿಖೆ ನಡೆಸುತ್ತಿರುವ ದೆಹಲಿ ಕ್ರೈಂ ಬ್ರಾಂಚ್ ನ ವಿಶೇಷ ತನಿಖಾ ತಂಡ ಬೆಚ್ಚಿಬೀಳಿಸುವ ಮಾಹಿತಿ ಬಹಿರಂಗಪಡಿಸಿದೆ. SIT ನೀಡಿರುವ ಮಾಹಿತಿ ಪ್ರಕಾರ, ಡಿಸೆಂಬರ್ 20 ರಂದು ನಡೆದ ಈ ಗಲಭೆಯಲ್ಲಿ ಸುಮಾರಿ 15ಕ್ಕೂ ಅಧಿಕ ಬಾಂಗ್ಲಾದೇಶದ ನಾಗರಿಕರು ಶಾಮೀಲಾಗಿದ್ದಾರೆ ಎನ್ನಲಾಗಿದೆ. ಡಿಸೆಂಬರ್ 20 ರಂದು ದೆಹಲಿಯ ಸೀಮಾಪುರಿ ಪ್ರದೇಶದಲ್ಲಿ  ಶುಕ್ರವಾರದ ಪ್ರಾರ್ಥನೆ ಬಳಿಕ ಭುಗಿಲೆದ್ದ ಈ ಗಲಭೆಗಳನ್ನು ನಡೆಸಿದ್ದ ಜನರ ಸಮೂಹದಲ್ಲಿ 15ಕ್ಕೂ ಅಧಿಕ ಬಾಂಗ್ಲಾದೇಶದ ನಾಗರಿಕರು ಶಾಮಿಲಾಗಿದ್ದು, ಇವರೆಲ್ಲರೂ ಅಪರಾಧಿಗಳಾಗಿದ್ದು, ಇವರೆಲ್ಲರೂ ಅಕ್ರಮವಾಗಿ ಸೀಮಾಪುರಿ ಪ್ರಾಂತ್ಯದಲ್ಲಿ ವಾಸವಾಗಿದ್ದರೂ ಎನ್ನಲಾಗಿದೆ. ಸದ್ಯ ಅವರೆಲ್ಲರ ಗುರುತು ಪತ್ತೆಹಚ್ಚಲಾಗಿದ್ದು, ಶೀಘ್ರವೇ ಅವರ ಮೇಲೆ ದಾಳಿ ನಡೆಸಿ ಬಂಧಿಸಲಾಗುವುದು ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಈ ಗಲಭೆಗಳ ತನಿಖೆ ನಡೆಸುತ್ತಿರುವ ದೆಹಲಿ ಕ್ರೈಂ ಬ್ರಾಂಚ್ ನ ವಿಶೇಷ ತನಿಖಾ ತಂಡ ಸೋಮವಾರ ತಿಹಾರ್ ಜೈಲಿಗೂ ಸಹ ಭೇಟಿ ನೀಡಲಿದ್ದು, ಗಲಭೆಗಳಲ್ಲಿ ಶಾಮೀಲಾಗಿದ್ದಾರೆ ಎನ್ನಲಾದ ಸುಮಾರು 55 ಕೈದಿಗಳ ವಿಚಾರಣೆ ನಡೆಸಲಿದೆ. ಈ ಗಲಭೆಗಳಲ್ಲಿ ಸುಮಾರು 15 PFI ಕಾರ್ಯಕರ್ತರ ಹೆಸರುಗಳು ಮುಂದೆ ಬಂದಿದ್ದು, ಅವರನ್ನು ಶೀಘ್ರವೇ SIT ವಿಚಾರಣೆಗೆ ಒಳಪಡಿಸಲಿದೆ. ಸದ್ಯ ಇವರೆಲ್ಲರ ಮೊಬೈಲ್ ಫೋನ್ ಗಳ ಮಾಹಿತಿ ಕಳೆಹಾಕಲಾಗುತ್ತಿದ್ದು, ದೆಹಲಿ ಗಲಭೆ ವೇಳೆ ಇವರೆಲ್ಲರೂ ಯಾವ ಲೋಕೇಶನ್ ನಲ್ಲಿದ್ದರು ಎಂಬುದನ್ನು ಪತ್ತೆಹಚ್ಚಲಾಗುತ್ತಿದೆ. ದೆಹಲಿ ಗಲಭೆಗಳಿಗಾಗಿ ಹರಿದುಬಂದ ಹಣ ಮತ್ತು ಲಾಜಿಸ್ಟಿಕ್ ಸಪೋರ್ಟ್ ಗೆ ಸಂಬಂಧಿಸಿದ ಸುಳಿವು ಕೂಡ SIT ಕೈಸೇರಿದ್ದು, ಶೀಘ್ರದಲ್ಲಿಯೇ SIT ಈ ಕುರಿತು ಮಾಹಿತಿ ಕೂಡ ನೀಡಲಿದೆ. ಅಷ್ಟೇ ಅಲ್ಲ ಗಲಭೆಗೆ ಸಂಬಂಧಿಸಿದಂತೆ ಕೆಲ ಸಂದಿಗ್ಧ ಫೋನ್ ಕರೆಗಳ ಡಿಟೇಲ್ಸ್ ಗಳನ್ನೂ ಕೂಡ ಕಲೆಹಾಕಲಾಗುತ್ತಿದೆ ಎಂದು SITಯ ಮೂಲಗಳಿಂದ ತಿಳಿದುಬಂದಿದೆ