ನವದೆಹಲಿ: ಪ್ರಜಾಪ್ರಭುತ್ವವನ್ನು ದೇಶದ ಸಂಸ್ಕೃತಿ, ಪರಂಪರೆ ಮತ್ತು ಅಭಿವೃದ್ಧಿಯ ಭಾಗವೆಂದು ಬಣ್ಣಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ತುರ್ತು ಪರಿಸ್ಥಿತಿಯ ಬಗ್ಗೆ ಮಾತನಾಡುತ್ತ ಪ್ರಜಾಪ್ರಭುತ್ವವನ್ನು ರಕ್ಷಿಸುವ ಬದ್ಧತೆಯನ್ನು ವ್ಯಕ್ತಪಡಿಸಿದರು.


COMMERCIAL BREAK
SCROLL TO CONTINUE READING

ಲೋಕಸಭೆ ಚುನಾವಣೆಯಲ್ಲಿ ಪ್ರಚಂಡ ಗೆಲುವಿನ ಬಳಿಕ ಎರಡನೇ ಅವಧಿಯ ಮೊದಲ 'ಮನ್ ಕಿ ಬಾತ್' ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ದೇಶದಲ್ಲಿ ನೀರಿನ ಸಂರಕ್ಷಣೆ ಮತ್ತು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಮಹತ್ವ ಸಾರಿದರು.


"ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದಾಗ, ರಾಜಕೀಯ ಪಕ್ಷಗಳು ಮಾತ್ರ ವಿರೋಧ ವ್ಯಕ್ತಪಡಿಸಲಿಲ್ಲ. ಈ ವಿರೋಧ ಕೇವಲ ಜೈಲುಗಳಿಗೆ ಮಾತ್ರ ಸೀಮಿತವಾಗಿರಲಿಲ್ಲ. ದೇಶದ ಪ್ರತಿ ಜನರ ಆಕ್ರೋಶ ಇದರಲ್ಲಿ ತುಂಬಿತ್ತು" ಎಂದು ಮೋದಿ ಹೇಳಿದರು.


ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ 61 ಕೋಟಿ ಮತದಾರರು ಮಹಾ ಚುನಾವಣೆಯಲ್ಲಿ ಪಾಲ್ಗೊಳ್ಳುವ ಮೂಲಕ ಜನತಂತ್ರ ವ್ಯವಸ್ಥೆಯನ್ನು ಅತ್ಯಂತ ಸಾರ್ಥಕಗೊಳಿಸಿದ್ದಾರೆ. ಈ ಸಂಖ್ಯೆ ಅಮೆರಿಕ ಜನಸಂಖ್ಯೆಗಿಂತಲೂ ಹೆಚ್ಚಿನದು ಎಂದು ಹೇಳಿದ ಮೋದಿ, "ನಾನು ಪ್ರಧಾನಿಯಾಗಿಲ್ಲ, ಈ ದೇಶದ ಜನ ನನ್ನನ್ನು ಪ್ರಧಾನಮಂತ್ರಿಯಾಗಿ ಮಾಡಿದ್ದಾರೆ. ಮತದಾರರು ತಮ್ಮ ಹಕ್ಕುಗಳನ್ನು ಚಲಾಯಿಸಿ ಇಡೀ ವಿಶ್ವಕ್ಕೆ ಮಾದರಿಯಾಗಿದ್ದಾರೆ" ಎಂದು ನುಡಿದರು.


"ನಾನು ಚುನಾವಣಾ ಆಯೋಗವನ್ನು ಮತ್ತು ಚುನಾವಣಾ ಪ್ರಕ್ರಿಯೆಗೆ ಸಂಬಂಧಿಸಿದ ಪ್ರತಿಯೊಬ್ಬ ವ್ಯಕ್ತಿಯನ್ನೂ ಅಭಿನಂದಿಸುತ್ತೇನೆ. ಭಾರತದ ಪ್ರಜ್ಞಾಪೂರ್ವಕ ಮತದಾರರನ್ನೂ ಅಭಿನಂದಿಸುತ್ತೇನೆ ಮತ್ತು ಗೌರವಿಸುತ್ತೇನೆ" ಎಂದು ಹೇಳಿದ ಮೋದಿ, "ನಮ್ಮ ದೇಶದ ಜನರು ಪ್ರಸ್ತುತ ವಿಚಾರಾಗಾ ಬಗ್ಗೆ ಚಿಂತಿಸುತ್ತಾರೆಂದು ತಿಳಿದು ನನಗೆ ಸಂತೋಷವಾಗಿದೆ. ಪ್ರಸ್ತುತ ಮಾತ್ರವಲ್ಲದೆ ಭವಿಷ್ಯದ ದೊಡ್ಡ ಸವಾಲಾಗಿರುವ ಸಮಸ್ಯೆಗಳ ಬಗ್ಗೆಯೂ ದೇಶದ ಜನತೆ ಯೋಚಿಸಬೇಕಿದೆ" ಎಂದರು


ಇದೇ ವೇಳೆ ನೀರಿನ ಸಂರಕ್ಷಣೆಯ ಮಹತ್ವವನ್ನು ಒತ್ತಿಹೇಳಿದ ಮೋದಿ, "ನಾವೆಲ್ಲರೂ ನೀರಿನ ಸಂರಕ್ಷಣೆಗಾಗಿ ಬೃಹತ್ ಆಂದೋಲನವನ್ನು ಪ್ರಾರಂಭಿಸೋಣ. ನಮ್ಮ ದೇಶದಲ್ಲಿ ನೀರನ್ನು ಸಂರಕ್ಷಿಸುವ ಅನೇಕ ಸಾಂಪ್ರದಾಯಿಕ ವಿಧಾನಗಳನ್ನು ಶತಮಾನಗಳಿಂದ ಬಳಸಲಾಗುತ್ತಿದೆ. ಆ ಸಾಂಪ್ರದಾಯಿಕ ನೀರಿನ ಸಂರಕ್ಷಣಾ ವಿಧಾನಗಳು ಅನುಸರಿಸಿ" ಎಂದು ಹೇಳಿದರು.


ಮುಂದಿವರೆದು ಮಾತನಾಡುತ್ತಾ, ಪ್ರತಿ ವರ್ಷ ದೇಶದ ಬಹುತೇಕ ಪ್ರದೇಶ ನೀರಿನ ಸಮಸ್ಯೆ ಅನುಭವಿಸುತ್ತಿದೆ. ಇಂಥ ಭೀಕರ ಸಮಸ್ಯೆಯಿಂದ ಪಾರಾಗಲು ನೀರಿನ ಸಂರಕ್ಷಣೆಗೆ ಆದ್ಯತೆ ನೀಡುವುದು ಅವಶ್ಯಕ. ಮಾನವಶಕ್ತಿ ಮತ್ತು ಸಹಕಾರದಿಂದ ನೀರಿನ ಸಮಸ್ಯೆ ಬಗೆಹರಿಸಬಹುದೆಂದು ನಂಬಿರುವುದಾಗಿ ತಿಳಿಸಿದ ಮೋದಿ, ನೂತನ ಜಲಶಕ್ತಿ ಸಚಿವಾಲಯ ಸ್ಥಾಪಿಸುವುದಾಗಿ ತಿಳಿಸಿದರು.