ನವದೆಹಲಿ: ರಾಜ್ಯದಲ್ಲ ಉಂಟಾದ ಭೀಕರ ಪ್ರವಾಹದಿಂದಾಗಿ ರಾಜಧಾನಿ ಪಾಟ್ನಾದಲ್ಲಿನ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ಎಲ್ಲೆಡೆ ಡೆಂಗ್ಯೂ ಭೀತಿ ಮನೆಮಾಡಿದೆ. ಈ ಬಗ್ಗೆ ಚರ್ಚೆ ನಡೆಸಿ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಮುಖ್ಯಮಂತ್ರಿ ನಿತೀಶ್ ಕುಮಾರ್ ಸೋಮವಾರ ಉನ್ನತ ಮಟ್ಟದ ಸಭೆ ನಡೆಸಿದರು. 


COMMERCIAL BREAK
SCROLL TO CONTINUE READING

ರಾಜ್ಯ ಆರೋಗ್ಯ ಇಲಾಖೆಯ ಹೇಳಿಕೆಯ ಪ್ರಕಾರ, ಸೆಪ್ಟೆಂಬರ್‌ನಿಂದ ಪಾಟ್ನಾದಲ್ಲಿ ಸುರಿದ ಭಾರಿ ಮಳೆ ಬಳಿಕ ಸುಮಾರು 900 ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.


ಪಾಟ್ನಾದಲ್ಲಿ ಅಲ್ಲಲ್ಲಿ ನೀರು ನಿಂತಿದ್ದು, ಈ ಸಮಸ್ಯೆ ಬಗೆಹರಿಸುವಲ್ಲಿ ವಿಫಲರಾದ ಕಾರಣ 12 ಅಧಿಕಾರಿಗಳನ್ನು ರಾಜ್ಯ ಸರ್ಕಾರ ಅಮಾನತುಗೊಳಿಸಿದ್ದು, 22 ಅಧಿಕಾರಿಗಳ ಸಂಬಳವನ್ನು ತಡೆಹಿಡಿದಿದೆ. ಅಲ್ಲದೆ, 12 ಎಂಜಿನಿಯರ್‌ಗಳಿಗೆ ಶೋಕಾಸ್ ನೋಟಿಸ್ ನೀಡಿದೆ.


ಮಳೆ ನೀರು ನಿಲ್ಲುವುದನ್ನು ತಡೆಯಲು  14 ಸ್ಥಳಗಳಲ್ಲಿ ಹೊಸ ಪಂಪಿಂಗ್ ಕೇಂದ್ರಗಳನ್ನು ಸ್ಥಾಪಿಸುವುದು ಮತ್ತು 100 ಹೊಸ ಡ್ಯೂಟರಿಂಗ್ ಪಂಪ್‌ಗಳನ್ನು ಖರೀದಿಸುವುದು ಸೇರಿದಂತೆ ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಬಿಹಾರ ಮುಖ್ಯ ಕಾರ್ಯದರ್ಶಿ ದೀಪಕ್ ಕುಮಾರ್ ತಿಳಿಸಿದ್ದಾರೆ.


ಏತನ್ಮಧ್ಯೆ, ರಾಜಧಾನಿಯಲ್ಲಿ ನೀರು ನಿರ್ವಹಣೆ ಮತ್ತು ಅನಗತ್ಯ ಪ್ರವೇಶದ ಬಗ್ಗೆ ಪರಿಶೀಲನೆ ನಡೆಸಲು ನಾಲ್ಕು ಸದಸ್ಯರ ಸಮಿತಿ ರಚಿಸಿ, ಒಂದು ತಿಂಗಳೊಳಗೆ ವರದಿ ಸಲ್ಲಿಸುವಂತೆ ಸಿಎಂ ನಿತೀಶ್ ಕುಮಾರ್ ಆದೇಶಿಸಿದ್ದಾರೆ.